ಹಾಸನ: ಕಾಂಗ್ರೆಸ್ (Congress) ಪಕ್ಷದಲ್ಲಿರುವ ಅಸಮಾಧಾನಿತ ಶಾಸಕರಿಗೆ ಜೆಡಿಎಸ್ (JDS) ಪಕ್ಷದ ಬಾಗಿಲು ತೆರೆದಿದೆ. ನೊಂದವರಿಗೆ, ನೋವಿನಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು (H.D Kumaraswamy) ಬಹಿರಂಗ ಆಹ್ವಾನ ನೀಡಿದ್ದಾರೆ.
ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಚಿವ ಸ್ಥಾನ ಸಿಗದ ಕಾಂಗ್ರೆಸ್‌ನ ಹಲವು ಶಾಸಕರು ನೋವಿನಲ್ಲಿದ್ದಾರೆ. ಅವರಿಗೆ ಮಾತು ಕೊಟ್ಟಿದ್ದರೂ ಅದರಂತೆ ನಡೆದುಕೊಂಡಿಲ್ಲ ಎಂದು ಕೆಲವರು ನೋವು ತೋಡಿಕೊಂಡಿರುವುದನ್ನು ಗಮನಿಸಿದ್ದೇನೆ. ಎಲ್ಲಾ ರೀತಿಯ ಸಹಕಾರ ನೀಡಲು ತಯಾರಿರುವ ಹಾಗೂ ಮುಕ್ತ ಮನಸ್ಸಿನಿಂದ ಜೆಡಿಎಸ್‌ಗೆ ಬರುವವರಿಗೆ ಆಹ್ವಾನ ನೀಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಪಾದಯಾತ್ರೆ ಅಲ್ಲ, ಅದು ಪ್ರಾಯಶ್ಚಿತ ಯಾತ್ರೆ : ಬಾಲಕೃಷ್ಣ ತಿರುಗೇಟು
ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ರಾಜ್ಯದ ಪರಿಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ಉತ್ತಮ ಕೆಲಸ ಮಾಡುವ ಸರ್ಕಾರ ಬರಬೇಕು. ಜನಪರವಾದ ತೀರ್ಮಾನ ಕೈಗೊಳ್ಳುವಂತಹ ಶಕ್ತಿ ಬೆಳೆಯಬೇಕು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿನ ಆಂತರಿಕ ವಿಶ್ವಾಸದ ಕೊರತೆ ಮತ್ತಷ್ಟು ಬಹಿರಂಗವಾಗಲಿದೆ. ಅಲ್ಲಿ ಉತ್ತಮವಾಗಿ ಕೆಲಸ ಮಾಡುವವರಿದ್ದಾರೆ. ಆದರೆ, ವಿಧಿಯಿಲ್ಲದೆ ಅಥವಾ ಅನಿವಾರ್ಯವಾಗಿ ಅಂತಹವರು ಮುಂದಿನ ದಿನಗಳಲ್ಲಿ ಆ ಪಕ್ಷ ತೊರೆಯುವುದು ದೂರವಿಲ್ಲ. ಅದನ್ನು ಕಾಲವೇ ನಿರ್ಧರಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ಶಾಸಕರು ಪಕ್ಷದಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಹಿರಿಯರು, ಕಿರಿಯರು ಎನ್ನುವುದಕ್ಕಿಂತ ಸಾರ್ವಜನಿಕವಾಗಿ ಭಯಭಕ್ತಿ ಇಟ್ಟುಕೊಂಡು ಜನರಿಗೆ ಗೌರವ ನೀಡುವ ಉತ್ತಮ ಶಾಸಕರು ಕಾಂಗ್ರೆಸ್‌ನಲ್ಲಿದ್ದಾರೆ. ಆದರೆ, ಪಕ್ಷ ನಿಷ್ಠೆ, ಬಲವಂತ ಅಥವಾ ಅನಿವಾರ್ಯತೆಯಿಂದಾಗಿ ಅವರು ಕಾಂಗ್ರೆಸ್‌ನಲ್ಲಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುತ್ತಿರುವ ಕೆಲ ಶಾಸಕರು, ಜನರ ಬಗ್ಗೆ ಭಯಭಕ್ತಿ ಇಟ್ಟುಕೊಂಡಿರುವ ತಾವು ಪಕ್ಷದಲ್ಲಿ ಮುಂದುವರಿಯುವುದು ಸರಿಯೋ, ತಪ್ಪೋ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ನನಗೆ ಮಾಹಿತಿಯಿದೆ. ಇದು ಮುಂದೆ ಯಾವ ರೀತಿಯ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡೋಣ ಎಂದರು. ಇದನ್ನೂ ಓದಿ: ಪಾದಯಾತ್ರೆಗೆ ಬಿಜೆಪಿಯಿಂದ ನೈತಿಕ ಬೆಂಬಲ -ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖಂಡರು ಭಾಗಿ: ಹೆಚ್‌ಡಿಕೆ



