ಹಾವೇರಿ: ಗಣೇಶ ವಿಸರ್ಜನಾ ಮೆರವಣಿಗೆಯ ಮಾರ್ಗಕ್ಕೆ(Ganesh Immersion Route) ಸಂಬಂಧಿಸಿದಂತೆ ಪೊಲೀಸ್ ಇಲಾಖೆ(Police Department) ಹಾಗೂ ಭಾವಸಾರ ಕ್ಷತ್ರಿಯ ಗಜಾನನ ಯುವಕ ಮಂಡಳಿಯ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ.
ರಾಜಬೀದಿ ಮೂಲಕವೇ ಮೆರವಣಿಗೆಗೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿರುವ ಮಂಡಳಿಯ ಸದಸ್ಯರು, ಮಾರ್ಗ ಬದಲಾವಣೆಗೆ ಪೊಲೀಸರು ಒಪ್ಪದ ಹಿನ್ನೆಲೆಯಲ್ಲಿ ಅರ್ಧ ದಾರಿಯಲ್ಲೇ ಮೆರವಣಿಗೆಯನ್ನು ಮೊಟಕುಗೊಳಿಸಿ ಗಣೇಶ ಮೂರ್ತಿಯನ್ನು ಮರಳಿ ದೇವಸ್ಥಾನದಲ್ಲೇ ಪ್ರತಿಷ್ಠಾಪಿಸಿದ್ದಾರೆ.
ಭಾನುವಾರ ರಾತ್ರಿ ಸವಣೂರು(Savanur) ಪಟ್ಟಣದ ದಂಡಿನ ಪೇಟೆಯ ಭಾವಸಾರ ಕ್ಷತ್ರಿಯ ಗಜಾನನ ಯುವಕ ಮಂಡಳಿಯ ವತಿಯಿಂದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತ್ತು. ಮೆರವಣಿಗೆಯು ರಾಜಬೀದಿ ಕಡೆಗೆ ಸಾಗುತ್ತಿದ್ದ ವೇಳೆ, ಸ್ಥಳದಲ್ಲಿದ್ದ ಪೊಲೀಸರು ಭದ್ರತಾ ದೃಷ್ಟಿಯಿಂದ ಈ ಹಿಂದೆ ನಿಗದಿಯಾಗಿದ್ದ ಹಳೆಯ ಮಾರ್ಗದಲ್ಲೇ ಸಾಗುವಂತೆ ಸೂಚಿಸಿದರು.
ಇದರಿಂದ ತೀವ್ರ ಅಸಮಾಧಾನಗೊಂಡ ಮಂಡಳಿಯ ಸದಸ್ಯರು ಹಾಗೂ ಭಕ್ತರು, ಈಗಾಗಲೇ ಸುಮಾರು 500 ಮೀಟರ್ ಮುಂದೆ ಸಾಗಿದ್ದ ಗಣೇಶ ಮೂರ್ತಿಯನ್ನು ಹಿಂದಕ್ಕೆ ತಂದು, ದಂಡಿನ ಪೇಟೆಯ ಗಣೇಶ ದೇವಸ್ಥಾನದಲ್ಲೇ ಮರು ಪ್ರತಿಷ್ಠಾಪಿಸಿದರು. ರಾಜಬೀದಿ ಮಾರ್ಗದಲ್ಲಿ ತೆರಳಲು ಅವಕಾಶ ನೀಡದಿದ್ದರೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಯುವಕ ಮಂಡಳಿಯ ವಾದವೇನು?:
ಕಳೆದ ಸುಮಾರು ಮೂರು ದಶಕಗಳಿಂದಲೂ ರಾಜಬೀದಿ ಮಾರ್ಗದಲ್ಲೇ ಸಾಂಪ್ರದಾಯಿಕವಾಗಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಡಿಜೆ ಅಳವಡಿಸಿಕೊಂಡು ಮೆರವಣಿಗೆ ನಡೆಸುತ್ತಿದ್ದ ಕಾರಣ, ಮಾರ್ಗವನ್ನು ಬದಲಾಯಿಸಿ ಮಾರ್ಕೆಟ್ ರಸ್ತೆಯ ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ಬಾರಿ ಡಿಜೆ ಬಳಕೆಗೆ ನಿರ್ಬಂಧ ವಿಧಿಸಿರುವುದರಿಂದ, ತಾವು ಎಂದಿನಂತೆ ಹಳೆಯ ರಾಜಬೀದಿ ಮಾರ್ಗದಲ್ಲೇ ಮೆರವಣಿಗೆ ನಡೆಸಲು ಅನುಮತಿ ನೀಡಬೇಕೆಂದು ಮಂಡಳಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ಕೇಸ್ ಮರು ತನಿಖೆ – ಮುಕ್ತ ಮನಸ್ಸಿನಿಂದ ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ
ಸಿಂಪಿಗಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ಹಲವು ವರ್ಷಗಳಿಂದ ಯಾವ ಮಾರ್ಗದಲ್ಲಿ ನಡೆಸಲಾಗುತ್ತಿತ್ತೋ, ಅದೇ ನಿಗದಿತ ಮಾರ್ಗದಲ್ಲೇ ಮುಂದುವರಿಸುವಂತೆ ಸೂಚಿಸಲಾಗಿತ್ತು. ಆದರೆ ಈ ಬಾರಿ ಗಣೇಶ ಸಮಿತಿಯು ಹಠಾತ್ತಾಗಿ ರಾಜಬೀದಿ ಮೂಲಕವೇ ಹೋಗುವುದಾಗಿ ಪಟ್ಟು ಹಿಡಿದಿದೆ. ಮಸೀದಿ ಇರುವ ಕಾರಣಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ದಿಢೀರನೆ ಹೊಸ ಮಾರ್ಗದಲ್ಲಿ ಮೆರವಣಿಗೆ ನಡೆಸಿದರೆ ಭದ್ರತಾ ಬಂದೋಬಸ್ತ್ ನಿಯೋಜಿಸುವುದು ಕಷ್ಟಸಾಧ್ಯವಾಗುತ್ತದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಮೊದಲಿನಿಂದಲೂ ಚಾಲ್ತಿಯಲ್ಲಿರುವ ಮಾರ್ಗದಲ್ಲೇ ಮೆರವಣಿಗೆ ಮುಗಿಸಬೇಕು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಒಂದೆಡೆ ಹಳೆಯ ರಾಜಬೀದಿ ಮಾರ್ಗದಲ್ಲೇ ಮೆರವಣಿಗೆ ನಡೆಸಲು ಬಿಡುವಂತೆ ಮಂಡಳಿ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಕಾನೂನು-ಸುವ್ಯವಸ್ಥೆ ಕಾಪಾಡಲು ನಿಗದಿತ ಮಾರ್ಗದಲ್ಲೇ ತೆರಳಬೇಕು ಎಂದು ಪೊಲೀಸರು ಕಟ್ಟುನಿಟ್ಟಿನ ನಿಲುವು ತಳೆದಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸವಣೂರು ಪಟ್ಟಣದಾದ್ಯಂತ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

