– ಉತ್ತರ ಕರ್ನಾಟಕದ ರೊಟ್ಟಿ ಪ್ರಿಯರಿಗೆ ಬೆಲೆ ಏರಿಕೆ ಬಿಸಿ
ಬಾಗಲಕೋಟೆ: ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರ ಹಾಗೂ ಅಚ್ಚುಮೆಚ್ಚಿನ ಜೋಳದ ರೊಟ್ಟಿಗೂ(Rotti) ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಳಿಜೋಳದ(White Jowar) ದರ ಪ್ರತಿ ಕೆ.ಜಿ.ಗೆ 100 ರೂ.ರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಒಂದೆಡೆ ರೈತರಿಗೆ(Farmers) ಬಂಪರ್ ಬೆಲೆ ಸಿಕ್ಕ ಖುಷಿಯಿದ್ದರೆ, ಮತ್ತೊಂದೆಡೆ ರೊಟ್ಟಿ ದರ ದುಬಾರಿಯಾಗುವ ಆತಂಕ ಮನೆಮಾಡಿದೆ.
ಈ ಹಿಂದೆ ಪ್ರತಿ ಕೆ.ಜಿ.ಗೆ 40 ರಿಂದ 50 ರೂ. ರಷ್ಟಿದ್ದ ಬಿಳಿಜೋಳದ ದರ ಇದೀಗ 100 ರಿಂದ 110 ರೂ. ರವರೆಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ಗೆ 5 ಸಾವಿರ ರೂ. ಇದ್ದ ಜೋಳದ ಬೆಲೆ ಈಗ ಬರೋಬ್ಬರಿ 8 ಸಾವಿರ ರೂ. ಗಡಿ ದಾಟಿದೆ.
ಬೆಲೆ ಏರಿಕೆ ಯಾಕೆ?
ಬಾಗಲಕೋಟೆ ಜಿಲ್ಲೆಯೊಂದರಲ್ಲೇ (Bagalkote District) ಈ ಹಿಂದೆ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ ರೈತರು ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ಹಾಗೂ ಕಳೆದ ಬಾರಿಯ ಬರಗಾಲದ ಪರಿಣಾಮದಿಂದಾಗಿ ಜೋಳದ ಬಿತ್ತನೆ ಪ್ರದೇಶ 30 ರಿಂದ 40 ಸಾವಿರ ಹೆಕ್ಟೇರ್ಗೆ ಇಳಿಕೆಯಾಗಿದೆ. ಇಳುವರಿ ಮತ್ತು ಬಿತ್ತನೆ ಕಡಿಮೆಯಾಗಿರುವುದರಿಂದ ಮಾರುಕಟ್ಟೆಗೆ ಸಮರ್ಪಕ ಪ್ರಮಾಣದಲ್ಲಿ ಜೋಳ ಪೂರೈಕೆಯಾಗುತ್ತಿಲ್ಲ.
ಖಾನಾವಳಿ ಮಾಲೀಕರ ಅಳಲು:
ಜೋಳದ ಬೆಲೆ ಗಗನಕ್ಕೇರಿರುವುದರಿಂದ ಮಾರುಕಟ್ಟೆಯಲ್ಲಿ ಖರೀದಿ ಪ್ರಮಾಣ ಕುಸಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹುಲ್ಯಾಳದ ವ್ಯಾಪಾರಸ್ಥರು, “ಈ ಹಿಂದೆ ಪ್ರತಿನಿತ್ಯ 2 ರಿಂದ 3 ಕ್ವಿಂಟಾಲ್ ಜೋಳ ಮಾರಾಟವಾಗುತ್ತಿತ್ತು. ಆದರೆ ಈಗ ದರ ಹೆಚ್ಚಾಗಿರುವುದರಿಂದ ದಿನಕ್ಕೆ ಹೆಚ್ಚೆಂದರೆ 1 ಕ್ವಿಂಟಾಲ್ ಮಾರಾಟವಾಗುವುದೇ ಕಷ್ಟವಾಗಿದೆ” ಎನ್ನುತ್ತಾರೆ.
ಇತ್ತ ಖಾನಾವಳಿ ಮಾಲೀಕರಿಗೂ ಈ ದರ ಏರಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. “ಗುಣಮಟ್ಟದ ಬಿಳಿಜೋಳ ಸಿಗುತ್ತಿಲ್ಲ, ಸಿಕ್ಕರೂ ಬೆಲೆ ವಿಪರೀತವಾಗಿದೆ. ಹೀಗಾಗಿ ಊಟದ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಆದರೆ ದರ ಹೆಚ್ಚಿಸಿದರೆ ಗ್ರಾಹಕರು ಬೇಸರಗೊಳ್ಳುತ್ತಾರೆ” ಎಂದು ಖಾನಾವಳಿ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪೂರೈಕೆ ಕೊರತೆಯಿಂದಾಗಿ ಜೋಳದ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಹೋಟೆಲ್ ಮತ್ತು ಖಾನಾವಳಿಗಳಲ್ಲಿ ರೊಟ್ಟಿ ಊಟ ಇನ್ನಷ್ಟು ತುಟ್ಟಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

