ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ (Bidadi Township) ವಿರೋಧಿಸಿ ಜೆಡಿಎಸ್ (JDS) ಕೈಗೊಂಡಿರುವ ಪಾದಯಾತ್ರೆ ವಿಚಾರವಾಗಿ ಶಾಸಕ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಇದು ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಪಾಪಕ್ಕೆ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ ಯಾತ್ರೆ’ ಎಂದು ವ್ಯಂಗ್ಯವಾಡಿದ್ದಾರೆ.
ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಅವರೇ ತಂದ ಯೋಜನೆಗೆ ಅವರೇ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ ಅವರು. ಈ ಯೋಜನೆ ಮಾಡಿ ಎಂದು ಯಾರಾದರೂ ಅವರನ್ನು ಕೇಳಿದ್ದರಾ ಎಂದು ಪ್ರಶ್ನಿಸಿದರು.
ತಾವು ತಂದ ಯೋಜನೆಯ ವಿರುದ್ಧವೇ ಈಗ ರಾಜಕೀಯ ಪಾದಯಾತ್ರೆ ಮಾಡುತ್ತಿರುವುದು ದುರಾದೃಷ್ಟಕರ. ರೈತರು ಪಾದಯಾತ್ರೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಜೆಡಿಎಸ್-ಬಿಜೆಪಿಯವರು ಕೂತು ಕೂತು ದಪ್ಪ ಆಗಿದ್ದಾರೆ. ಸ್ವಲ್ಪ ಎಕ್ಸರ್ಸೈಸ್ ಆಗಲಿ ಎಂದು ವಾಕಿಂಗ್ ಮಾಡುತ್ತಿದ್ದಾರೆ. ವಾಕಿಂಗ್ ಮಾಡಲಿ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಮೈಸೂರು | ಲೇಡಿ ʻಡಾಲಿʼ ಕಿರುಕುಳಕ್ಕೆ ಬೇಸತ್ತ ಮಹಿಳೆ, ಕೀಟನಾಶಕ ಸೇವಿಸಿ ಆತ್ಮಹತ್ಯೆ
ಯಾರ ಆಡಳಿತ ಅವಧಿಯಲ್ಲಿ ಏನೇನು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನೊಳಗೊಂಡ ಜಾಹೀರಾತನ್ನು ಶೀಘ್ರದಲ್ಲೇ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಜೆಡಿಎಸ್ ಪಾದಯಾತ್ರೆಯನ್ನು ಮೇಕೆದಾಟು ಪಾದಯಾತ್ರೆಗೆ ಹೋಲಿಸಿದ ಕುಮಾರಸ್ವಾಮಿ ಅವರ ಹೇಳಿಕೆಗೂ ಬಾಲಕೃಷ್ಣ ತಿರುಗೇಟು ನೀಡಿದರು. ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದು ರಾಜ್ಯಕ್ಕೆ ನೀರು ಬೇಕು ಎಂಬ ಸತ್ಕಾರಣಕ್ಕಾಗಿ. ನೀರಿಗಾಗಿ ಮಾಡಿದ ಪಾದಯಾತ್ರೆಗೂ, ಇವರ ರಾಜಕೀಯ ಪಾದಯಾತ್ರೆಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ನೈಸ್ ರಸ್ತೆ ಯೋಜನೆ ಆರಂಭವಾಗಿದ್ದೇ ಹೆಚ್.ಡಿ. ದೇವೇಗೌಡರ ಕಾಲದಲ್ಲಿ ಎಂದು ಹೇಳಿದ ಬಾಲಕೃಷ್ಣ, ದೇವೇಗೌಡರು ನೈಸ್ ರಸ್ತೆ ಮಾಡದಿದ್ದರೆ ಇವತ್ತು ಈ ಚರ್ಚೆಯೇ ಇರುತ್ತಿರಲಿಲ್ಲ. ಟೋಲ್ ಕಟ್ಟಬೇಡಿ ಎಂದು ಹೇಳಲು ಕುಮಾರಸ್ವಾಮಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡುತ್ತಿದ್ದಾರಾ? ಕಾನೂನುಬದ್ಧವಾಗಿ ಹೋರಾಟ ಮಾಡಲಿ. ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವುದು, ಗುಂಪು ಕಟ್ಟುವುದು ಕ್ಷುಲ್ಲಕ ರಾಜಕಾರಣ. ಅಲ್ಲಿ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಜವಾಬ್ದಾರಿ? ಅವರು ತಮ್ಮ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಗುರಿ ತಲುಪಲು ನಾವು ಯಾವುದೇ ಅಡ್ಡಿಪಡಿಸುವುದಿಲ್ಲ. ಪಾದಯಾತ್ರೆಗೆ ಸಂಪೂರ್ಣ ಅನುಮತಿ ನೀಡುತ್ತೇವೆ ಎಂದು ಬಾಲಕೃಷ್ಣ ವ್ಯಂಗ್ಯವಾಗಿ ಹೇಳಿದರು.ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ ಟೆಕ್ಕಿ ನಾಪತ್ತೆ – ಹಲವು ಅನುಮಾನ



