ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ(KRIDL) 7% ಲಂಚ ಪಡೆಯುತ್ತಿರುವ ಇಬ್ಬರು ಸಚಿವರನ್ನು ಕೂಡಲೇ ವಜಾ ಮಾಡಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಾದರೂ ಲಂಚ ಪಡೆದರೆ ನನಗೆ ಕರೆ ಮಾಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅಧಿಕೃತವಾಗಿ ಪತ್ರ ಬರೆದು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೆಆರ್‌ಐಡಿಎಲ್ ನಲ್ಲಿ ಹೆಚ್ಚುವರಿಯಾಗಿ 7% ಪಡೆಯಲಾಗುತ್ತಿದೆ, ಈ ಬಗ್ಗೆ ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಇದು ಅವರ ಪಕ್ಷದ ಶಾಸಕರೇ ಮಾಡಿರುವ ಆರೋಪ ಪ್ರಮುಖ ಸಾಕ್ಷ್ಯ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು ಕೂಡ ರೌಡಿಗಳಾಗಿದ್ದಾರೆ. ಅಂದರೆ ಈ ಸರ್ಕಾರ ಕಮಿಷನ್ ಆಡಳಿತ ಮಾಡುತ್ತಿದೆ ಎಂಬುದು ಸಾಬೀತಾಗಿದೆ ಎಂದರು. ಇದನ್ನೂ ಓದಿ: ಎಇಇ ನೇಮಕಾತಿ ಅಕ್ರಮ| ಸರಣಿ ಪ್ರಶ್ನೆ ಕೇಳಿ ಪ್ರಿಯಾಂಕ್ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ
100 ರೂ. ಬಿಡುಗಡೆ ಆದರೆ 30 ರೂ. ಗಳಷ್ಟು ಮಾತ್ರ ಕೆಲಸ ಆಗುತ್ತದೆ. ಉಳಿದ ಶೇ.70ರಷ್ಟು ಕಮಿಷನ್‌ಗೆ ಹೋಗುತ್ತದೆ. ನಾವು ಆರೋಪ ಮಾಡಿದಾಗ ದಾಖಲೆ ಕೊಡಲು ಕೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಕಮಿಷನ್ ಬಗ್ಗೆ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಇಲಾಖಾ ಸಚಿವರು ಪ್ರತಿ ತಿಂಗಳು ಕಮಿಷನ್ ಪಡೆಯುತ್ತಿದ್ದಾರೆ ಎಂದಿದ್ದಾರೆ ಎಂದರು.
ಈಗಾಗಲೇ ಒಬ್ಬ ಸಚಿವ ಭ್ರಷ್ಟಾಚಾರದಿಂದಾಗಿ ರಾಜೀನಾಮೆ ನೀಡಿದ್ದಾರೆ. ಆದರೂ ಇಬ್ಬರು ಸಚಿವರಿಗೆ ಭಯವಿಲ್ಲ. ಈ 7% ರಾಹುಲ್ ಗಾಂಧಿಗೂ ತಲುಪುತ್ತದೆ ಎಂದರು.
ಕರ್ನಾಟಕ ಎಂದರೆ ಇತರೆ ರಾಜ್ಯಗಳಿಗೆ ಮಾದರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂದರೆ ಈ 7 ಪರ್ಸೆಂಟ್ ಕಮಿಷನ್ ಇಡೀ ದೇಶಕ್ಕೆ ಮಾದರಿಯಾಗಿದೆ. ಇನ್ನು ಇಲಾಖಾ ತನಿಖೆ ಎಂದು ಆದೇಶ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಈ ಕಮಿಷನ್‌ನಿಂದಾಗಿ ಒಟ್ಟು ಸುಮಾರು 800 ಕೋಟಿಗಳಷ್ಟು ಸಂಗ್ರಹವಾಗಿರಬಹುದು. ಕರ್ನಾಟಕ ಎಟಿಎಂ ಎಂದು ನಾನು ಹಿಂದೆಯೇ ಹೇಳಿದ್ದೆ ಎಂದು ಹೇಳಿದರು.
ಬಿ.ಆರ್.ಪಾಟೀಲ್ ವಸತಿ ಇಲಾಖೆಯ ಕಮಿಷನ್ ಬಗ್ಗೆ ಮಾತಾಡಿದ್ದರು. ಬಸವರಾಜ ರಾಯರೆಡ್ಡಿ ಕೆಕೆಆರ್ ಡಿಬಿ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು. ಆರ್.ಬಿ.ತಿಮ್ಮಾಪುರ ಮಾಡಿದ್ದ ಅಕ್ರಮದ ಕುರಿತು ನಾನೇ ಆಡಿಯೋ ಮತ್ತು ದಾಖಲೆಗಳನ್ನು ನೀಡಿದ್ದೆ. ಸರ್ಕಾರಕ್ಕೆ ಮಾನವಿದ್ದರೆ ಆ ಇಬ್ಬರೂ ಸಚಿವರನ್ನು ವಜಾ ಮಾಡಬೇಕಿತ್ತು. ಕಾಂಗ್ರೆಸ್ ಶಾಸಕ ರೈ ಆರೋಪ ಮಾಡಿರುವ ಈ ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
