ಖ್ಯಾತ ಪೌರಾಣಿಕ ಧಾರಾವಾಹಿ‘ಮಹಾಭಾರತದಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಹಾಗೂ ವೃತ್ತಿಪರ ಕುಸ್ತಿಪಟು (WWE ಖ್ಯಾತಿಯ) ಸೌರವ್ ಗುರ್ಜರ್(Saurav Gurjar) ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿ 29 ವರ್ಷದ ಯುವತಿಯೊಬ್ಬರು ನೀಡಿದ ದೂರಿನನ್ವಯ ಹೈದರಾಬಾದ್‌ನ ಗಚಿಬೌಲಿ ಠಾಣಾ ಪೊಲೀಸರು ಸೌರವ್ ಗುರ್ಜರ್ ಅವರನ್ನು ಬಂಧಿಸಿದ್ದಾರೆ. ಈ ಬಂಧನ ಸೆಪ್ಟೆಂಬರ್ 17ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಸೌರವ್ ಗುರ್ಜರ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ (LOC) ಜಾರಿ ಮಾಡಿದ್ದರು. ಸೆಪ್ಟೆಂಬರ್ 17ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ, ವಲಸೆ ಅಧಿಕಾರಿಗಳು ಹಾಗೂ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ಮುಂಬೈನಿಂದ ಹೈದರಾಬಾದ್‌ಗೆ ಕರೆತರಲಾಯಿತು. ಇದನ್ನೂ ಓದಿ: ದೊಡ್ಮನೆ Vs ಮಂಜ – ವೈಲೆಂಟ್ ಆಗಿದ್ದ ಮಾಡರ್ನ್ ಮಹಾಕವಿ ಈಗ ಫುಲ್ ಸೈಲೆಂಟ್
ಯಾರು ಈ ಸೌರವ್ ಗುರ್ಜರ್?
ಮೂಲತಃ ಮಧ್ಯಪ್ರದೇಶದವರಾದ ಸೌರವ್ ಗುರ್ಜರ್, ರಾಷ್ಟ್ರ ಮಟ್ಟದ ಕಿಕ್‌ಬಾಕ್ಸಿಂಗ್ ಹಾಗೂ ಕುಸ್ತಿಪಟುವಾಗಿದ್ದರು. ಖಾಸಗಿ ವಾಹಿನಿಯ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಭೀಮ’ನ ಪಾತ್ರ ನಿರ್ವಹಿಸುವ ಮೂಲಕ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ್ದರು.
ವಿಶ್ವವಿಖ್ಯಾತ WWE ಅಖಾಡದಲ್ಲೂ ‘ಸಂಗಾ’ ಹೆಸರಿನಲ್ಲಿ ಕಾದಾಡಿ ಗಮನ ಸೆಳೆದಿದ್ದರು. ಇತ್ತೀಚೆಗೆ ರಣಬೀರ್ ಕಪೂರ್ ಅಭಿನಯದ ಬಿಗ್ ಬಜೆಟ್ ‘ಬ್ರಹ್ಮಾಸ್ತ್ರ’ ಚಿತ್ರದಲ್ಲೂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗಂಭೀರ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಜೈಲು ಸೇರಿರುವುದು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.

