ನವದೆಹಲಿ: ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ನೋಯ್ಡಾ ಮೂಲದ ಐಜಿ ಡಿಫೇನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ದೀರ್ಘವ್ಯಾಪ್ತಿಯ KAL ಒನ್-ವೇ ಅಟ್ಯಾಕ್ ಡ್ರೋನ್ನ್ನು (KAL Long Range Attack Drone) ರಾಜಸ್ಥಾನದ ಪೋಖ್ರಾನ್ (Pokhran) ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ವಾಹನದ ಮೇಲೆ ಅಳವಡಿಸಲಾಗಿದ್ದ ಉಡಾವಣಾ ಸೈಟ್ನಿಂದ ಡ್ರೋನ್ನ್ನು ಹಾರಿಸಲಾಗಿದ್ದು, ಪರೀಕ್ಷೆಯಲ್ಲಿ ಅದರ ಏರ್ಫ್ರೇಮ್, ಪ್ರೊಪಲ್ಷನ್, ಏವಿಯಾನಿಕ್ಸ್, ನ್ಯಾವಿಗೇಷನ್ ಹಾಗೂ ಮಿಷನ್ ವ್ಯವಸ್ಥೆಗಳ ಸಮನ್ವಯವನ್ನು ಪರಿಶೀಲಿಸಲಾಯಿತು. ಆದರೆ ಪರೀಕ್ಷೆಯ ವೇಳೆ ಡ್ರೋನ್ ನಿಖರವಾಗಿ ಎಷ್ಟು ದೂರ ಅಥವಾ ಎಷ್ಟು ಸಮಯ ಹಾರಾಟ ನಡೆಸಿತು ಎಂಬುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಜೀವಂತ ಪೇಲೋಡ್ನೊಂದಿಗೆ ಪರೀಕ್ಷೆ ನಡೆಸಲಾಗಿತ್ತೇ ಅಥವಾ ಅಂತಿಮ ಗುರಿ ದಾಳಿ ನಡೆಸಲಾಗಿತ್ತೇ ಎಂಬುದನ್ನೂ ತಿಳಿಸಿಲ್ಲ. ಇದನ್ನೂ ಓದಿ: ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಭದ್ರತಾ ಪಡೆಗಳು
ಐಜಿ ಡಿಫೆನ್ಸ್ ಪ್ರಕಾರ KAL ಡ್ರೋನ್ 1,000 ಕಿ.ಮೀ.ವರೆಗೆ ವ್ಯಾಪ್ತಿ ಹೊಂದಿದ್ದು, 7ರಿಂದ 8 ಗಂಟೆಗಳವರೆಗೆ ನಿರಂತರವಾಗಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಗರಿಷ್ಠ 50 ಕೆ.ಜಿ. ಪೇಲೋಡ್ ಹೊತ್ತೊಯ್ಯಬಲ್ಲ ಈ ಡ್ರೋನ್ ಸಮುದ್ರಮಟ್ಟದಿಂದ ಸುಮಾರು 5,000 ಮೀಟರ್ ಎತ್ತರದವರೆಗೆ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಡ್ರೋನ್ನಲ್ಲಿ ಮಲ್ಟಿ-ಬ್ಯಾಂಡ್ GNSS ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ನ್ನು ಸಂಯೋಜಿಸಿರುವ ನ್ಯಾವಿಗೇಷನ್ ವ್ಯವಸ್ಥೆ ಬಳಸಲಾಗಿದೆ. ಅಲ್ಲದೇ ಮಿಷನ್ನ ವಿವಿಧ ಹಂತಗಳಲ್ಲಿ ಡ್ರೋನ್ ಸ್ವಾಯತ್ತವಾಗಿ ಹಾರಾಟ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ.
ಮಿಷನ್ನ ವಿನ್ಯಾಸ ಮತ್ತು ಅಗತ್ಯ ಅನುಮತಿಗಳ ಆಧಾರದ ಮೇಲೆ ಮೂಲಸೌಕರ್ಯ, ರಾಡಾರ್ ವ್ಯವಸ್ಥೆಗಳು, ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ವಿವಿಧ ನಿರ್ದಿಷ್ಟ ಗುರಿಗಳನ್ನು ಹೊಡೆಯಲು ಇದನ್ನು ಬಳಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.
KAL ಅನ್ನು GRID ಬ್ಯಾಟಲ್ ಮ್ಯಾನೇಮೆಂಟ್ ಸಿಸ್ಟಮ್ನೊಂದಿಗೆ ಸಂಯೋಜಿಸಬಹುದಾಗಿದೆ. ಇದು ಮಾನವರಹಿತ ಮತ್ತು ಯುದ್ಧಭೂಮಿಯ ಮಾಹಿತಿಯನ್ನು ಒಗ್ಗೂಡಿಸಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಿರುವ AI ಆಧಾರಿತ C5ISRT ವ್ಯವಸ್ಥೆಯಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ವಾಹನ ಪಲ್ಟಿ; ಐವರು ಸೈನಿಕರಿಗೆ ಗಾಯ

