– 22 ಲಕ್ಷ ಮೌಲ್ಯದ ವಜ್ರದ ಹಾರ ಜಪ್ತಿ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಸುಮಾರು 2 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿದ್ದು, ಜೊತೆಗೆ 22 ಲಕ್ಷ ರೂ.ಮೌಲ್ಯದ ಚಿನ್ನ-ವಜ್ರದ ಹಾರವನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರ ಪ್ರಕರಣವನ್ನು ವಿಶೇಷ ತನಿಖಾ ತಂಡ ತನಿಖೆಗೆ ವಹಿಸಿದ ಬೆನ್ನಲ್ಲೇ, ಸಿಐಡಿ ನಡೆಸಿರುವ ತನಿಖಾ ವರದಿಯ ಸ್ಫೋಟಕ ಮುಖ್ಯಾಂಶಗಳು ಬಹಿರಂಗಗೊಂಡಿವೆ. ಈವರೆಗೆ ಹಗರಣದಲ್ಲಿ ಭಾಗಿಯಾದ ಶಂಕೆಯಿರುವ ಸುಮಾರು 40 ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ | ಖಾಸಗಿ ದರ್ಬಾರ್ ಬಗ್ಗೆ ಮಾಹಿತಿ ನೀಡಿದ ರಾಜಮಾತೆ, ಯಾವ ದಿನ ಯಾವ ಕಾರ್ಯಕ್ರಮ?
ಎಷ್ಟು ಹಣ ಜಪ್ತಿ?
– ಬಸವರಾಜ್ ಕನ್ನಾಳೆ ಮತ್ತು ಆತನ ಪತ್ನಿ ಖಾತೆ – ಒಟ್ಟು 71.18 ಲಕ್ಷ ಹಣ
– ಕನ್ನಾಳೆಯ ವೈಯಕ್ತಿಕ ಖಾತೆ – 5.76 ಲಕ್ಷ ರೂ.
– ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಬ್ಯಾಂಕ್ – 64 ಲಕ್ಷ ರೂ.
– ಕೋಟಕ್ ಬ್ಯಾಂಕ್‌ನಲ್ಲಿದ್ದ 5.20 ಲಕ್ಷ ರೂ.
ಓಂ ಲಕ್ಷ್ಮಿ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬಾಲುರೆಡ್ಡಿಗೆ ಸೇರಿದ ಕೋಟಕ್ ಬ್ಯಾಂಕ್ ಖಾತೆಗಳಿಗೆ ನೇಮಕಾತಿ ಆಕಾಂಕ್ಷಿ ಅಭ್ಯರ್ಥಿಗಳಿಂದ ಬರೋಬ್ಬರಿ 92 ಲಕ್ಷ ರೂ. ಜಮೆಯಾಗಿರುವುದು ಪತ್ತೆಯಾಗಿದ್ದು, ಆ ಎಲ್ಲಾ ಖಾತೆಗಳನ್ನು ಸಿಐಡಿ ಸಂಪೂರ್ಣವಾಗಿ ಫ್ರೀಜ್ ಮಾಡಿದೆ.
ನೇಮಕಾತಿ ದಂಧೆಯಿಂದ ಬಂದ ಅಕ್ರಮ ಹಣದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರು ತಮ್ಮ ಆಪ್ತ ಮಹಿಳಾ ಸ್ನೇಹಿತೆಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದು ತನಿಖೆಯಲ್ಲಿ ಬಯಲಾಗಿದೆ. ಸ್ನೇಹಿತೆಗಾಗಿ ಖರೀದಿಸಿ ಕೊಟ್ಟಿದ್ದ ಸುಮಾರು 22 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಹಾರವನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹಗರಣದ ಕಿಂಗ್‌ಪಿನ್‌ಗಳಾದ ಬಸವರಾಜ್ ಕನ್ನಾಳೆ, ಮಧ್ಯವರ್ತಿಗಳು ಹಾಗೂ ಪರೀಕ್ಷಾರ್ಥಿ ಅಭ್ಯರ್ಥಿಗಳ ನಡುವೆ ವಾಟ್ಸಪ್ ಮೂಲಕವೇ ನಿರಂತರ ಸಂವಹನ ನಡೆದಿತ್ತು. ಪರೀಕ್ಷೆ ಆರಂಭವಾಗುವ ಮೊದಲೇ ಸುಮಾರು 60 ರಿಂದ 80 ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಸೋರಿಕೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಆಯ್ಕೆಯಾಗಿದ್ದ ಐದು ಮಂದಿ ಅಭ್ಯರ್ಥಿಗಳನ್ನು ದೇವನಹಳ್ಳಿಯ ರೆಸಾರ್ಟ್‌ವೊಂದಕ್ಕೆ ಕರೆದೊಯ್ದು, ಲೀಕ್ ಆದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವುದು ಹೇಗೆ ಎಂಬುದರ ಕುರಿತು ವಿಶೇಷ ತರಬೇತಿ ಮತ್ತು ಅಭ್ಯಾಸ ಮಾಡಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ಮುದ್ರಣದ ಉಸ್ತುವಾರಿ ಹೊತ್ತಿದ್ದ ಅಧಿಕಾರಿಯನ್ನೂ (ಇನ್‌ಚಾರ್ಜ್) ಸಿಐಡಿ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಹುದ್ದೆ ಪಡೆಯಲು ಅಭ್ಯರ್ಥಿಗಳು ಮಧ್ಯವರ್ತಿಗಳಿಗೆ ಕೋಟ್ಯಂತರ ರೂಪಾಯಿ ನಗದು ನೀಡಿರುವುದು ಪತ್ತೆಯಾಗಿದೆ. ಅಭ್ಯರ್ಥಿ ಕಿರಣ್ ಗೌಡ10 ಲಕ್ಷ ರೂ., ಮೊಹಮ್ಮದ್ ಸೊಹೈಲ್ 20 ಲಕ್ಷ, ಸಲೀಂ ಒಂಟಿ 30 ಲಕ್ಷ ರೂ. ನಗದು ಹಣ ಸಂದಾಯವಾಗಿದೆ.

