ಸ್ಯಾಂಡಲ್ವುಡ್ (Sandalwood) ಮೊದಲ ಪ್ಯಾನ್ ಇಂಡಿಯಾ ಸಿನಿಮಾ (Shantikranthi) ಶಾಂತಿಕ್ರಾಂತಿ. ಕನ್ನಡದ ಮೊದಲ ಭಾರೀ ಬಜೆಟ್ ಸಿನಿಮಾ ಕೂಡ ಹೌದು. ಒಂದೇ ಸಿನಿಮಾ ನಾಲ್ಕು ಭಾಷೆಗಳಲ್ಲಿ ತಯಾರಾಗಿ, ಮೂವರು ಸ್ಟಾರ್ ನಟರು ನಾಯಕನ ಪಾತ್ರ ಮಾಡಿದ ಮೊದಲ ಚಿತ್ರವೂ ಹೌದು. ಮೊದ ಮೊದಲು ಈ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಕನಸಾಗಿತ್ತು. ಸಿನಿಮಾ ಶುರುವಾಗಿ ಹತ್ತೇ ಹತ್ತು ದಿನಕ್ಕೆ ಅದು ಕೆಟ್ಟ ಕನಸಾಗಿ ಬದಲಾಯ್ತು. ಬೆಟ್ಟದಷ್ಟು ಆಸೆಗಳನ್ನು ಹೊತ್ತು ಶಾಂತಿಕ್ರಾಂತಿ ಸಿನಿಮಾ ಮಾಡಲು ಹೊರಟಿದ್ದ ರವಿಚಂದ್ರನ್, ಹತ್ತು ದಿನಗಳ ನಂತರ ಸಿನಿಮಾ ನಿಲ್ಲಿಸಿಬಿಡುವ ಮಾತುಗಳನ್ನು ಆಡಿದ್ದರು. ಆದರೆ, ಆ ಸಿನಿಮಾ ಆಗಿದ್ದೇ ರೋಚಕ. ಫಲಿತಾಂಶ ಬೆಚ್ಚಿ ಬೀಳಿಸುವಂಥದ್ದು. ಶಾಂತಿಕ್ರಾಂತಿ ಸಿನಿಮಾದ ಹಿಂದೆ ಹತ್ತಾರು ಕರಾಳ ಕಥೆಗಳಿವೆ. ಆದರೂ, ಈ ಸಿನಿಮಾವನ್ನು ಮತ್ತೆ ನೋಡಬೇಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ.
ಅದು 1990ರ ದಶಕ ಮುಗಿದ ಹೊತ್ತು. ಕನ್ನಡದಲ್ಲಿ ಒಂದು ಕಡೆ ಡಾ.ರಾಜ್‌ಕುಮಾರ್, ಮತ್ತೊಂದು ಕಡೆ ಡಾ.ವಿಷ್ಣುವರ್ಧನ್ ಅಕ್ಷರಶಃ ಸ್ಯಾಂಡಲ್ವುಡ್ ಅನ್ನು ಆಳಿದ್ದರು. ಅವರ ನಡುವೆಯೇ ಬೆಳೆದು ಬಂದವರು ಕ್ರೇಜಿಸ್ಟಾರ್ ರವಿಚಂದ್ರನ್. ತೊಂಬತ್ತರ ದಶಕ ಮುಗಿದ ಹೊತ್ತಿನಲ್ಲಿ ರವಿಚಂದ್ರನ್ ಚಂದನವನದ ಡಾರ್ಲಿಂಗ್ ಆಗಿ ಬದಲಾಗಿದ್ದರು. ರಾಮಾಚಾರಿ ಸಿನಿಮಾ ರವಿಚಂದ್ರನ್ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ರವಿಚಂದ್ರನ್ ಸಿನಿಮಾ ಮಾಡುತ್ತಿದ್ದಾರೆ ಅಂತ ಗೊತ್ತಾದರೆ, ಸಾಕು ನೆರೆ ರಾಜ್ಯದ ಚಿತ್ರೋದ್ಯಮಿಗಳು ಸಿನಿಮಾ ನೋಡೋಕೆ ಬರುತ್ತಿದ್ದರು. ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ರವಿಚಂದ್ರನ್ ಸಿನಿಮಾ ತಯಾರಿಸುವಲ್ಲಿ ಮಾಗಿ ಬಿಟ್ಟಿದ್ದರು. ರಾಮಾಚಾರಿ ಯಶಸ್ಸಿನಲ್ಲಿ ತೇಲುತ್ತಿದ್ದ ರವಿಚಂದ್ರನ್ಗೆ ಆಗ ಹೊಳೆದದ್ದೇ ಶಾಂತಿಕ್ರಾಂತಿ ಸಿನಿಮಾ. ಇದನ್ನೂ ಓದಿ: ಬಿಗ್‌ಬಾಸ್ ಅಗ್ನಿ ಪರೀಕ್ಷೆಗೆ ಬರಲಿಲ್ಲ ಗಿಲ್ಲಿ ನಟ
ಕಣ್ಣೀರೋದೇ ಕನಸು ಕಾಣೋಕೆ ಅಂತ ನಂಬಿದವರು ರವಿಚಂದ್ರನ್. ಅದನ್ನು ಅಕ್ಷರಶಃ ಜಾರಿ ತರುವುದಕ್ಕಾಗಿ ಶಾಂತಿಕ್ರಾಂತಿ ಸಿನಿಮಾವನ್ನು ಕೈಗೆತ್ತಿಕೊಂಡರು. ಅದು ಸಾಮಾನ್ಯ ಕನಸು ಆಗಿರಲಿಲ್ಲ. ಭಾರತೀಯ ಸಿನಿಮಾ ರಂಗವೇ ಬೆಚ್ಚಿ ಬೀಳಿಸುವಂಥ ಕನಸು ಕಂಡಿದ್ದರು ರವಿಚಂದ್ರನ್. ಮೇಲ್ನೋಟಕ್ಕೆ ಈ ಸಿನಿಮಾ ಮಕ್ಕಳ ಪ್ರಧಾನ ಚಿತ್ರವೆನಿಸಿದರು, ಅದರ ಹಿಂದಿನ ಕಥೆಯೇ ಬೇರೆಯದ್ದಾಗಿತ್ತು. ಅಂಥದ್ದೊಂದು ಸ್ಕ್ರಿಪ್ಟ್ ತಗೆದುಕೊಂಡು ರವಿಚಂದ್ರನ್ ಸೀದಾ ಹೋಗಿದ್ದ ಅವರ ತಂದೆ ವೀರಸ್ವಾಮಿ ಅವರ ಬಳಿ. ವೀರಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ ಹೌಸ್ ಆಗಿನ ಕಾಲದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದ ನಿರ್ಮಾಣ ಸಂಸ್ಥೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಅನೇಕ ಸ್ಟಾರ್ ನಟರ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಅನೇಕ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದೆ. ಅದೇ ಪ್ರೊಡಕ್ಷನ್ ಹೌಸ್‌ನಲ್ಲಿ ಶಾಂತಿಕ್ರಾಂತಿ ಸಿನಿಮಾ ಮಾಡಲು ಮುಂದಾಗಿದ್ದರು ರವಿಚಂದ್ರನ್. ಮಗನ ಕನಸು ಕೇಳಿ ವೀರಸ್ವಾಮಿ ಅವರು ಸ್ವತಃ ಬೆಚ್ಚಿಬಿದ್ದಿದ್ದರು.


ಶಾಂತಿ ಕ್ರಾಂತಿಯ ಕುರಿತು ಸಣ್ಣದಾಗಿರೋ ಕನಸು ಕಂಡಿರಲಿಲ್ಲ ರವಿಚಂದ್ರನ್. ಒಂದು ಕಥೆ, ನಾಲ್ಕು ಭಾಷೆಗಳಲ್ಲಿ ಸಿನಿಮಾ. ಮೂವರು ಸ್ಟಾರ್ ನಟರು. ಆ ಸಿನಿಮಾದ ಬಜೆಟ್ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನೇ ಮಾಡಬಹುದಾಗಿತ್ತು. ಮಗನ ಕನಸು ಹಾಳು ಮಾಡೋದು ಬೇಡ ಅಂತ ನಿರ್ಧರಿಸಿದ್ದ ವೀರಸ್ವಾಮಿ ಅವರು ಶಾಂತಿಕ್ರಾಂತಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಕನ್ನಡದಲ್ಲಿ ನಾಯಕನ ಪಾತ್ರವನ್ನು ರವಿಚಂದ್ರನ್ ಅವರೇ ಮಾಡೋದಾಗಿತ್ತು. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸೂಪರ್ ಸ್ಟಾರ್ಗಳನ್ನೇ ಆಯ್ಕೆ ಮಾಡಿಕೊಂಡಿದ್ದರು ರವಿಚಂದ್ರನ್. ಆಗ ತೆಲುಗಿನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದವರು ನಾಗಾರ್ಜುನ್. ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್. ಅವರನ್ನೇ ಭೇಟಿ ಮಾಡಿ ಒಪ್ಪಿಸಿ ಬಿಟ್ಟರು ರವಿಚಂದ್ರನ್. ತೆಲುಗಿನ ನಾಗಾರ್ಜುನ್ ನಾಯಕನಾದರೆ, ತಮಿಳು ಮತ್ತು ಹಿಂದಿಯಲ್ಲಿ ರಜನಿಕಾಂತ್ ಅವರ ಕಾಲ್ಶೀಟ್ ಪಡೆಯಲಾಗಿತ್ತು. ಅದು ದುಬಾರಿ ಕಾಲ್ಶೀಟ್ ಕೂಡ ಆಗಿತ್ತು.
ಆಗಿನ್ನೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇರಲಿಲ್ಲ. ನೇರವಾಗಿ ಒಂದೇ ಭಾಷೆಯಲ್ಲಿ ಸಿನಿಮಾ ಮಾಡಿ, ಆನಂತರ ಇತರ ಭಾಷೆಗಳಿಗೆ ಡಬ್ ಮಾಡಲಾಗುತ್ತಿತ್ತು. ಆದರೆ, ನಾಲ್ಕು ಭಾಷೆಗಳಲ್ಲೂ ನೇರವಾಗಿಯೇ ಚಿತ್ರೀಕರಣಕ್ಕೆ ಮುಂದಾದರು ರವಿಚಂದ್ರನ್. ಬೆಂಗಳೂರಿನಲ್ಲಿ ಚಿತ್ರೀಕರಣ. ಬೆಂಗಳೂರಿನ ಬಹುತೇಕ ಸ್ಟಾರ್ ಹೋಟೆಲ್ಗಳು ಭರ್ತಿ ಆಗಿದ್ದವು. ಅಷ್ಟರ ಮಟ್ಟಿಗೆ ಖರ್ಚಿನಲ್ಲಿ ಧಾರಾಳತೆ ಮರೆದಿದ್ದರು ರವಿಚಂದ್ರನ್. ಒಂದು ದಿನಕ್ಕೆ ಶಾಂತಿಕ್ರಾಂತಿ ಶೂಟಿಂಗ್ಗೆ ತಗಲುತ್ತಿದ್ದ ವೆಚ್ಚ ಬರೋಬ್ಬರಿ ಎಂಟು ಲಕ್ಷ ರೂಪಾಯಿ. ಈ ಬಜೆಟ್ನಲ್ಲಿ ಒಂದೇ ಸಿನಿಮಾವನ್ನೇ ಮಾಡಬಹುದಿತ್ತು. ಸಿನಿಮಾವೇನೂ ಶುರುವಾಯಿತು. ಸಿನಿಮಾ ಶುರುವಾಗಿ ಹತ್ತೇ ಹತ್ತು ದಿನಗಳು ಕಳೆದಿರಲಿಲ್ಲ. ಯಾಕೋ ಸಿನಿಮಾ ತಮ್ಮ ಹಿಡಿತಕ್ಕೆ ಸಿಗುತ್ತಿಲ್ಲ ಅಂತ ರವಿಚಂದ್ರನ್ ಅವರಿಗೆ ಅನಿಸೋಕೆ ಶುರುವಾಗಿತ್ತು. ಅಲ್ಲಿಗೆ ಇಡೀ ತಂಡಕ್ಕೆ ಆಘಾತವಾಗಿತ್ತು.
ಹಲವು ಕನಸುಗಳನ್ನು ಕಟ್ಟಿಕೊಂಡು ಶುರು ಮಾಡಿದ್ದ ಚಿತ್ರ ಶಾಂತಿಕ್ರಾಂತಿ. ಆಗಿನ ಕಾಲದಲ್ಲೇ ಆ ಚಿತ್ರಕ್ಕೆಂದು ಹತ್ತು ಕೋಟಿ ರೂಪಾಯಿ ಬಜೆಟ್ ಮಾಡಲಾಗಿತ್ತು. ಇವತ್ತಿಗೆ ಅದು ನೂರು ಕೋಟಿಗೂ ಹೆಚ್ಚು. ರಜನಿಕಾಂತ್ ಮತ್ತು ನಾಗಾರ್ಜುನ್ ಅವರ ಕಾಲ್ಶೀಟ್ಗಳು ಅಷ್ಟು ಸುಲಭಕ್ಕೆ ಸಿಗದ ಹೊತ್ತಲ್ಲಿ, ಶಾಂತಿಕ್ರಾಂತಿ ಒಪ್ಪಿಕೊಂಡಿದ್ದರು. ನಾಲ್ಕು ಭಾಷೆಗಳ ರೈರ್ಸ್ರ, ಬೇರೆ ಬೇರೆ ಭಾಷೆಗಳ ನುರಿತ ತಂತ್ರಜ್ಞರು, ಅಸಂಖ್ಯಾತ ಮಕ್ಕಳು, ಅನುಭವಿ ಕಲಾವಿದರ ತಂಡವನ್ನೇ ಈ ಚಿತ್ರಕ್ಕಾಗಿ ರವಿಚಂದ್ರನ್ ಕಟ್ಟಿದ್ದರು. ಆದರೆ, ಹತ್ತೇ ಹತ್ತು ದಿನಕ್ಕೆ ಭ್ರಮನಿರಸವಾಗಿತ್ತು. ಈ ಸಿನಿಮಾವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು ರವಿಚಂದ್ರನ್. ಅದನ್ನು ಅವರ ತಂದೆಯ ಮುಂದೆಯೇ ಹೇಳಿಕೊಂಡರು. “ಆಗಲೇ ಒಂದಷ್ಟು ಖುರ್ಚು ಮಾಡಿದ್ದೇನೆ. ಮತ್ತೆ ಖರ್ಚು ಮಾಡೋದು ಬೇಡ. ಈ ಸಿನಿಮಾ ಹಿಡಿತಕ್ಕೆ ಸಿಗುತ್ತಿಲ್ಲ. ನಿಲ್ಲಿಸಿ ಬಿಡುತ್ತೇನೆ..” ಅಂತ ಹೇಳಿದ್ದರು ರವಿಚಂದ್ರನ್..
ಹೌದು, ಆರೇಳು ತಿಂಗಳ ಕಾಲ ಶಾಂತಿಕ್ರಾಂತಿ ಸಿನಿಮಾಗಾಗಿ ಹಗಲಿರುಳು ಕೆಲಸ ಮಾಡಿದ್ದ, ಒಂದಷ್ಟು ದಿನಗಳ ಕಾಲ ಚಿತ್ರೀಕರಣದಲ್ಲೂ ತೊಡಗಿದ್ದ ರವಿಚಂದ್ರನ್ ಅಂಥದ್ದೊಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದರು. ಈ ಸಿನಿಮಾವನ್ನೇ ನಿಲ್ಲಿಸೋದೇ ಸೂಕ್ತ ಅನ್ನೋದು ಅವರ ಅಭಿಪ್ರಾಯ ಆಗಿತ್ತು. ದೊಡ್ಡ ಮಟ್ಟದಲ್ಲಿ ಇದು ಆರ್ಥಿಕ ಸಂಕಷ್ಟ ತಂದೊಡ್ಡಬಲ್ಲದು ಅನ್ನುವ ಅಂದಾಜೂ ಅವರಿಗೆ ಸಿಕ್ಕಿತ್ತು. ಆದರೆ, ಮಗನ ಮಾತನ್ನು ಕೇಳಲಿಲ್ಲ ವೀರಸ್ವಾಮಿ. ನಿನ್ನನ್ನೇ ನಂಬಿ ರಜನಿಕಾಂತ್ ಮತ್ತು ನಾಗಾರ್ಜುನ್ ಕಾಲ್ಶೀಟ್ ಕೊಟ್ಟಿದ್ದಾರೆ. ಅನೇಕರು ನಿನಗಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ತರೋದು ಬೇಡ. ಅದೇನೇ ಆದರೂ, ಸಿನಿಮಾ ಮುಂದುವರೆಸು ಅಂತ ರಾಮಸ್ವಾಮಿ ಮಗನಿಗೆ ಬುದ್ದಿ ಹೇಳಿದ್ದರು. ಆಗ ಮತ್ತೆ ಶುರುವಾಗಿತ್ತು ಶಾಂತಿಕ್ರಾಂತಿ. ಆದರೆ, ಕೊನೆವರೆಗೂ ಆ ಸಿನಿಮಾ ರವಿಚಂದ್ರನ್ ಅವರ ಹಿಡಿತಕ್ಕೇ ಸಿಗಲೇ ಇಲ್ಲವಂತೆ.
ಅಪ್ಪನ ಮಾತಿನಂತೆ ಮತ್ತೆ ಶಾಂತಿಕ್ರಾಂತಿ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಹಣ ನೀರಿನಂತೆ ಖರ್ಚಾಗುತ್ತಿತ್ತು. ಆಯಾ ಭಾಷೆಯ ಕಲಾವಿದರು ತಮ್ಮ ಸಮಯಕ್ಕೆ ಬಂದು ಪಾತ್ರಗಳನ್ನು ಮಾಡಿ ಹೋಗುತ್ತಿದ್ದರು. ಆದರೆ, ರವಿಚಂದ್ರನ್ಗೆ ಸಿನಿಮಾದ ಹದ ತಪ್ಪಿದೆ ಅಂತ ಅನಿಸಿತ್ತು. ಅಪ್ಪನ ಮಾತು ಮೀರುವಂತಿಲ್ಲ. ಶಕ್ತಿ ಮೀರಿ ಪ್ರಯತ್ನ ಮಾಡೋಣ. ಗೆಲುವನ್ನು ಜನರಿಗೆ ಬಿಡೋಣ ಅಂತ ನಿರ್ಧಾರ ಮಾಡಿದ್ದರು. ನಿತ್ಯವೂ ಜಾತ್ರೆಯ ರೀತಿಯಲ್ಲೇ ಚಿತ್ರೀಕರಣವಾಗುತ್ತಿತ್ತು. ಶಾಂತಿಕ್ರಾಂತಿಯ ಕುರಿತು ಇಡೀ ದೇಶವೇ ಮಾತಾಡುತ್ತಿತ್ತು. ಈ ಸಿನಿಮಾದ ಮುಹೂರ್ತದ ದಿನ ಭಾರತೀಯ ನಾನಾ ಭಾಷೆಯ ಪತ್ರಕರ್ತರನ್ನು ಕರೆಯಿಸಲಾಗಿತ್ತು. ಅವರು ಶಾಂತಿಕ್ರಾಂತಿಯ ಕ್ರಾಂತಿಯನ್ನು ವಿವರಿಸಿದ್ದ ರೀತಿ ಭಾರತೀಯ ಸಿನಿಮಾ ರಂಗವನ್ನೇ ಬೆಚ್ಚಿ ಬೀಳಿಸಿತ್ತು. ಈ ಎಲ್ಲ ಜವಾಬ್ದಾರಿಯನ್ನೂ ರವಿಚಂದ್ರನ್ ಹೊರಬೇಕಿತ್ತು. ಹೊತ್ತರು ಆದರೆ, ಫಲಿತಾಂಶ ಮಾತ್ರ ಕ್ರೇಜಿಸ್ಟಾರ್ ಹೃದಯವನ್ನೇ ಒಡೆದು ಹಾಕಿತ್ತು.
ಹತ್ತು ಕೋಟಿ ರೂಪಾಯಿಯನ್ನು ನುಂಗಿಹಾಕಿತ್ತು ಶಾಂತಿಕ್ರಾಂತಿ. ಮತ್ತೆ ವಾಪಸ್ಸು ಹಣ ಬರುತ್ತದೆ ಅನ್ನೋ ನಂಬಿಕೆ ವೀರಸ್ವಾಮಿ ಅವರದ್ದು. ಒಂದು ಕಡೆ ಇಬ್ಬರು ಸೂಪರ್ ಸ್ಟಾರ್ಸ್ ಮತ್ತೊಂದು ಕಡೆ ಈಗಾಗಲೇ ಗೆದ್ದಿರುವ ಮಗ. ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿದ್ದವು. ಬಾಲಿವುಡ್ನಿಂದ ಜೂಹಿ ಚಾವ್ಲಾರನ್ನು ಕರೆತರಲಾಗಿತ್ತು. ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದ್ದರಿಂದ, ಭಾರತೀಯ ಸಿನಿಮಾ ರಂಗವು ಶಾಂತಿಕ್ರಾಂತಿಯನ್ನು ಅಪ್ಪಿ ಮುದ್ದಾಡುತ್ತದೆ ಅನ್ನೋ ನಂಬಿಕೆ ಈಶ್ವರಿ ಪ್ರೊಡಕ್ಷನ್ ಸಂಸ್ಥೆಗಿತ್ತು. ಆದರೆ, ಪ್ರೇಕ್ಷಕರು ಆ ಸಿನಿಮಾವನ್ನು ಸ್ವೀಕರಿಸಲೇ ಇಲ್ಲ. ಆರ್ಥಿಕವಾಗಿ ರವಿಚಂದ್ರನ್ ಕುಸಿದು ಹೋದರು. ಅವರೇ ಹೇಳಿಕೊಂಡಂತೆ, ರವಿಚಂದ್ರನ್ ಅವರನ್ನು ಇಪ್ಪತ್ತ ವರ್ಷಗಳ ಹಿಂದೆಕ್ಕೆ ಈ ಸಿನಿಮಾ ಕರೆದುಕೊಂಡು ಹೋಗಿದೆಯಂತೆ. ಅಂತಹ ಸಿನಿಮಾವನ್ನು ರಿರಿಲೀಸ್ ಮಾಡೋಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಕ್ಯಾಂಪೇನ್ ಕೂಡ ಮಾಡಲಾಗುತ್ತಿದೆ. ಸಿನಿಮಾ ರಿರಿಲೀಸ್ ಮಾಡೋಕೆ ಸಾಧ್ಯವಾ? ಕಷ್ಟ ಅನ್ನುತ್ತಿವೆ ಮೂಲಗಳು. ಇದನ್ನೂ ಓದಿ: Toxic Official Trailer | ರಾ ಆ್ಯಕ್ಷನ್… ರೊಮ್ಯಾನ್ಸ್… ಮಾಫಿಯಾ ಸಾಮ್ರಾಜ್ಯ – ಡಾರ್ಕ್ ಗ್ಯಾಂಗ್‌ಸ್ಟರ್ ಲೋಕಕ್ಕೆ ರಾ`ಕಿಂಗ್’ ಎಂಟ್ರಿ!

