ಡಿಯರ್ ರಚ್ಚು / ರಚನಾ
ಇಷ್ಟು ದಿನ ಕಾಲ್ನಲ್ಲಿ, ಮೆಸೇಜ್ಗಳಲ್ಲಿ ಮಾತಾಡಿ.. ನೆನಪುಗಳಲ್ಲಿ ಪ್ರೀತಿಸುತ್ತಿದ್ದ ನಾನು, ಈಗ ನಿನ್ನನ್ನು ನೇರವಾಗಿ ಭೇಟಿಯಾಗಲು ಬರುತ್ತಿದ್ದೇನೆ.
ಕೆಲವು ವರ್ಷಗಳ ಹಿಂದೆ ಇನ್ಸ್ಟಾದಲ್ಲಿ ಆಕಸ್ಮಿಕವಾಗಿ ಬಂದ ಮೆಸೇಜ್ನಿಂದ ಆರಂಭವಾದ ಸ್ನೇಹ ಎಲ್ಲಿಗೆ ತಂದು ನಿಲ್ಲಿಸಿದೆ ನೋಡು. ಹೃದಯ ಕುಂಡದಲ್ಲಿ ಒಲವಿನ ಹೂ ಅರಳಿಸುವ ತನಕ ತಲುಪಿದ ಆ ಸಂದೇಶದ ನೆನಪು ಅದೆಷ್ಟು ಮಧುರ! ಆ ಕ್ಷಣವನ್ನು ನಾನು ಎಂದಿಗೂ ಮರೆಯೋದಿಲ್ಲ. ಯಾಕಂದ್ರೆ ಪ್ರೇಮ ಕಡಲಲ್ಲಿ ಅಪರೂಪದ ʻಮುತ್ತುʼ ಸಿಕ್ಕ ಆ ಕ್ಷಣಕ್ಕೆ ಎದೆಯಲ್ಲಿ ವಿಶೇಷ ಸ್ಥಾನವಿದೆ! ಇದನ್ನೂ ಓದಿ: ನದಿಗೆ ಅದೆಷ್ಟೇ ತಡೆ ಇದ್ದರೂ ಸಮುದ್ರ ಸೇರದೇ ಇರುವುದೇ?
ನಿನ್ನನು ನೋಡಲು ಬರುವ ದಿನಗಳ ಕೌಂಟ್ಡೌನ್, ನೆನಪಾದಾಗಲೆಲ್ಲ ನನ್ನ ಮನಸ್ಸಿನಲ್ಲಿ ಏನೋ ಒಂದು ರೀತಿಯ ಸಂತೋಷ, ನಾಚಿಕೆ, ಕಾತರ ಎಲ್ಲವೂ ಒಟ್ಟಿಗೆ ಮೂಡುತ್ತದೆ. ನಿನ್ನನ್ನು ಮೊದಲ ಬಾರಿ ಎದುರು ನೋಡಿದಾಗ ಏನು ಮಾತನಾಡಬೇಕು? ಬಹುಶಃ ಮಾತುಗಳು ಮೌನವಾಗಬಹುದು. ಆದರೆ ನನ್ನ ಕಣ್ಣುಗಳು ಮಾತ್ರ ನಿನ್ನ ಮೇಲಿನ ಪ್ರೀತಿಯನ್ನು ಹೇಳಿಬಿಡಬಹುದು!

ನಿನ್ನನ್ನು ಭೇಟಿಯಾಗುವ ದಿನಕ್ಕಾಗಿ ನಾನು ಎಷ್ಟು ಕಾತರದಿಂದ ಕಾಯುತ್ತಿದ್ದೇನೆ ಗೊತ್ತಾ? ನಿನ್ನ ಜೊತೆ ಹತ್ತಿರದಿಂದ ಮಾತನಾಡಬೇಕು, ನಿನ್ನ ನಗುವನ್ನು ಹತ್ತಿರದಿಂದ ನೋಡಬೇಕು, ನಿನ್ನ ಕಣ್ಣಲ್ಲಿ ನನ್ನನ್ನು ಹುಡುಕಬೇಕು! ಈ ರೀತಿ ಚಿಕ್ಕ ಚಿಕ್ಕ ಆಸೆಗಳೇ ನನ್ನ ಹೃದಯದಲ್ಲಿ ತುಂಬಿಹೋಗಿವೆ.
ನಿನ್ನನ್ನು ಭೇಟಿಯಾಗುವ ಆ ಕ್ಷಣವನ್ನು ನಾನು ಜೀವನಪೂರ್ತಿ ಮರೆಯೋದಿಲ್ಲ. ನಮ್ಮ ಮೊದಲ ಭೇಟಿಯ ಕ್ಷಣಗಳು ನಮ್ಮ ಪ್ರೀತಿಯ ಸುಂದರ ನೆನಪಾಗಿ ಉಳಿಯಲಿ ಎಂದು ನನ್ನ ಹೃದಯ ಬಯಸುತ್ತಿದೆ. ನಾನು ಬರುತ್ತಿರೋದು ನಿನ್ನನ್ನು ನೋಡಲು ಮಾತ್ರವಲ್ಲ. ನಿನ್ನ ಜೊತೆ ಕೆಲವು ಸುಂದರ ಕ್ಷಣಗಳನ್ನು ಕಳೆಯಲು. ನಿನ್ನ ಕೈ ಹಿಡಿದು ಸ್ವಲ್ಪ ದೂರ ನಡೆಯಲು. ಹಾಗೇ ಪ್ರೇಮದ ಊರು ತಲುಪಲು! ಅಲ್ಲೆಲ್ಲ ಚೆಂದದ ಕನಸು ಕಟ್ಟಲು! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ನಿನ್ನನ್ನು ನೋಡಲು ಕಾತರದಿಂದ ಕಾಯುತ್ತಿರುವ
ನಿನ್ನ ಪ್ರೀತಿಯ ಗೆಳೆಯ

