– ಆತ್ಮಗಳ ಭಯಕ್ಕೆ ದೇವಸ್ಥಾನಕ್ಕೆ ಓಡಿದ್ದ ಆರೋಪಿ
ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ರಾಜಾಜಿನಗರದ ಏಳು ಜನರ ಬರ್ಬರ ಕೊಲೆ ಪ್ರಕರಣದ ತನಿಖೆಯಲ್ಲಿ ಒಂದೊಂದೇ ಭಯಾನಕ ಸತ್ಯಗಳು ಹೊರಬರುತ್ತಿವೆ. ಅಂದು ಅಷ್ಟೊಂದು ಕ್ರೂರವಾಗಿ ಕೊಲೆ ಮಾಡಿದ್ದ (Bengaluru Crime) ಆರೋಪಿ ಇಂದುಶೇಖರ್, ಕೃತ್ಯದ ಬಳಿಕ ಆತ್ಮಗಳ ಭಯದಿಂದ ಇಡೀ ರಾತ್ರಿ ನಿದ್ದೆ ಮಾಡದೆ ನರಳಿದ್ದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಪತ್ನಿಯ ಮೇಲೆ ಕ್ರೌರ್ಯ ಮೆರೆದಿದ್ದ ಪಾಪಿ
ಕೊಲೆ ಮಾಡುವುದಕ್ಕೂ ಮೊದಲು ಇಂದುಶೇಖರ್ ತನ್ನ ಪತ್ನಿ ಸುನಿತಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ. “ಯಾಕೆ ಹೊಡೆಯುತ್ತಿದ್ದೀಯಾ?” ಎಂದು ಸುನಿತಾ ಪ್ರಶ್ನಿಸಿದಾಗ, “ನಿನ್ನಿಂದಲೇ ನನ್ನ ನೆಮ್ಮದಿ ಮತ್ತು ಜೀವನ ಹಾಳಾಯಿತು” ಎಂದು ಕೂಗಾಡಿದ್ದ. ಬಳಿಕ ತಲೆಗೆ ಹೊರಳು ಕಲ್ಲಿನಿಂದ ಜೋರಾಗಿ ಹೊಡೆದು, ತೀವ್ರ ರಕ್ತಸ್ರಾವವಾಗುತ್ತಿದ್ದ ಪತ್ನಿಯನ್ನು ಬಾತ್ರೂಮ್ಗೆ ಎಳೆದೊಯ್ದಿದ್ದ. ಅಷ್ಟಕ್ಕೂ ಸುಮ್ಮನಾಗದ ಈ ಪಾಪಿ, ಕಾಲಿನಿಂದ ಒದ್ದು ಆಕೆಯ ಪ್ರಾಣ ಹೋಗುವವರೆಗೂ ಪಕ್ಕದಲ್ಲೇ ಕುಳಿತು ವಿಕೃತಿ ಮೆರೆದಿದ್ದಾನೆ.
ಕಣ್ಣಾರೆ ಕಂಡರೂ ಕಣ್ಣೀರು ಹಾಕದ ಮಗಳು
ಇಷ್ಟೆಲ್ಲಾ ಕ್ರೌರ್ಯ ನಡೆಯುತ್ತಿದ್ದರೂ ಅಲ್ಲೇ ಇದ್ದ ಅಪ್ರಾಪ್ತ ಮಗಳು ಕಿಂಚಿತ್ತೂ ಕಣ್ಣೀರು ಹಾಕಿರಲಿಲ್ಲ. ಬದಲಾಗಿ ತಾಯಿಯ ಮೃತದೇಹವನ್ನು ಕಟ್ಟಲು ತಂದೆಗೆ ಸೀರೆ ಮತ್ತು ಬೆಡ್ಶೀಟ್ ತಂದುಕೊಟ್ಟು ಸಾಥ್ ನೀಡಿದ್ದಳು. ಬಳಿಕ ಮೃತದೇಹಗಳನ್ನು ತಾನೇ ಮೇಲಿನಿಂದ ಎಳೆದು ತಂದಿದ್ದ ಹಂತಕ ಇಂದುಶೇಖರ್, ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ.
ಆತ್ಮಗಳ ಭಯಕ್ಕೆ ದೇವಸ್ಥಾನಕ್ಕೆ ಓಡಿದ್ದ ಆರೋಪಿ
ಇಷ್ಟೊಂದು ಭೀಕರವಾಗಿ ಕೊಲೆ ಮಾಡಿದ ನಂತರ ಆರೋಪಿ ಇಂದುಶೇಖರ್ಗೆ ಸತ್ತವರ ಆತ್ಮಗಳ ಭಯ ಶುರುವಾಗಿತ್ತು. ಕೊಲೆಯಾದವರು ಆತ್ಮವಾಗಿ ಬಂದು ತನಗೆ ತೊಂದರೆ ಕೊಡುತ್ತಾರೆ ಎಂದು ಹೆದರಿದ್ದ ಆತ, ಅಂದು ರಾತ್ರಿ ಇಡೀ ನಿದ್ದೆ ಮಾಡದೆ ಮನೆಯಲ್ಲಿ ಓಡಾಡುತ್ತಾ ದೇವರ ನಾಮ ಸ್ಮರಣೆ ಮಾಡುತ್ತಾ ಜಪ ಮಾಡಿದ್ದಾನೆ. ಭಯದಿಂದ ಮನೆಯಲ್ಲೂ ಇರಲಾಗದೆ ಹೊರಗಡೆ ಸುತ್ತಾಡಿದ್ದ ತಂದೆಗೆ, ಅಪ್ರಾಪ್ತ ಮಗಳೇ ಧೈರ್ಯ ತುಂಬಿದ್ದಳು. ಬಳಿಕ ಇಬ್ಬರೂ ಸೇರಿ ಮನೆಯ ಸಮೀಪದ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದರು.ಇದನ್ನೂ ಓದಿ: ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ
ವಿಚಾರಣೆ ವೇಳೆ ಹಂತಕನ ಡ್ರಾಮಾ
ಸದ್ಯ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಮುಂದೆ ಸ್ಪಷ್ಟವಾಗಿ ಇಂಗ್ಲಿಷ್ನಲ್ಲಿ ಮಾತನಾಡುತ್ತಿರುವ ಆರೋಪಿ ಇಂದುಶೇಖರ್, ತನಿಖೆಯ ದಿಕ್ಕು ತಪ್ಪಿಸಲು ಗಂಟೆಗೊಮ್ಮೆ ‘ಬಿಪಿ (BP) ಹೆಚ್ಚಾಗಿದೆ, ತಲೆ ಸುತ್ತುತ್ತಿದೆ, ಐ ನೀಡ್ ರೆಸ್ಟ್ (ನನಗೆ ವಿಶ್ರಾಂತಿ ಬೇಕು)’ ಎಂದು ನಾಟಕವಾಡುತ್ತಿದ್ದಾನೆ. ಪ್ರಕರಣದ ಕುರಿತು ತನಿಖೆ ಮುಂದುವರಿದೆ.ಇದನ್ನೂ ಓದಿ: ಸಿಎಂ ನಿವಾಸಕ್ಕೆ ಗಂಗಾ ಅಂತ ಹೆಸರು ಇಟ್ಟರೆ ಏನು ಸಮಸ್ಯೆ? – ಯು.ಟಿ. ಖಾದರ್
