ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದ (Canada) ಲ್ಯಾಂಗ್ಲಿ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಭಾರತೀಯನ ಮೃತದೇಹ ಪತ್ತೆಯಾಗಿದೆ.
25 ವರ್ಷದ ತುಷಾರ್ ಶರ್ಮಾ ಮೃತ ಯುವಕ ಎಂದು ಗುರುತಿಸಲಾಗಿದೆ. ತುಷಾರ್ ಕೆನಡಾದ ಸರ್ರೆ ಎಂಬಲ್ಲಿ ವಾಸವಾಗಿದ್ದರು. ಅಕ್ಟೋಬರ್ 29ರ ರಾತ್ರಿ ಸುಮಾರು 10:30ರ ವೇಳೆಗೆ ಲ್ಯಾಂಗ್ಲಿಯ ರಾವ್ಲಿನ್ಸನ್ ಕ್ರೆಸೆಂಟ್ ಬಳಿ ಕಾರೊಂದು ಹೊತ್ತಿ ಉರಿಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಈ ವೇಳೆ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ತುಷಾರ್ ಅವರ ಮೃತದೇಹ ಸಿಕ್ಕಿದೆ.
ಇದೊಂದು ಉದ್ದೇಶಪೂರ್ವಕ ಕೊಲೆ ಇರಬಹುದು ಎಂದು ಕೆನಡಾ ಪೊಲೀಸರು ಶಂಕಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ (IHIT) ತನಿಖೆ ನಡೆಸುತ್ತಿದೆ. ವಿಧಿವಿಜ್ಞಾನ ತಂಡಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆಹಾಕುತ್ತಿವೆ.ಇದನ್ನೂ ಓದಿ: UP Election| ಬಿಜೆಪಿ ಹೊಸ ಪ್ರಯೋಗ – ಮಹಿಳೆಯರನ್ನು ಸೆಳೆಯಲು ಸ್ತ್ರೀಯರಿಂದಲೇ ಪ್ರಚಾರ
ತುಷಾರ್ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಕೆನಡಾದಲ್ಲಿ ಅವರಿಗೆ ಹೆಚ್ಚಿನ ಸ್ನೇಹಿತರ ಬಳಗವೂ ಇರಲಿಲ್ಲ. ಹೀಗಿರುವಾಗ ಅವರನ್ನು ಯಾರು ಮತ್ತು ಯಾವ ಕಾರಣಕ್ಕೆ ಕೊಲೆ ಮಾಡಿದರು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದಲೇ ಕಾರಿಗೆ ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸದ್ಯ ತನಿಖಾಧಿಕಾರಿಗಳು ತುಷಾರ್ ಅವರ ಕುಟುಂಬಸ್ಥರು ಮತ್ತು ವಿದೇಶದಲ್ಲಿರುವ ಸಂಬಂಧಿಕರ ಜೊತೆ ಮಾತನಾಡುತ್ತಿದ್ದಾರೆ. ಸಾವಿಗೂ ಮುನ್ನ ತುಷಾರ್ ಯಾರ ಜೊತೆ ಸಂಪರ್ಕದಲ್ಲಿದ್ದರು, ಅವರ ದಿನಚರಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಘಟನೆ ನಡೆದ ಸಮಯದಲ್ಲಿ ಆ ಏರಿಯಾದಲ್ಲಿ ಏನಾದರೂ ಅನುಮಾನಾಸ್ಪದವಾಗಿ ಕಂಡುಬಂದಿದ್ದರೆ ಅಥವಾ ಸಿಸಿಟಿವಿ ದೃಶ್ಯಾವಳಿಗಳಿದ್ದರೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮಾಫಿಯಾ, ಅಶಿಸ್ತು ಸಹಿಸಲ್ಲ: ಮೊದಲ ದಿನವೇ ಬೆಂಗಳೂರು ಪೊಲೀಸರಿಗೆ ಹಿತೇಂದ್ರ ಎಚ್ಚರಿಕೆ
