ಬೆಂಗಳೂರು: ಪ್ರಸಕ್ತ ವರ್ಷದ 2ನೇ ಹಾಗೂ ಕೊನೆಯ ಸೂರ್ಯಗ್ರಹಣ ಆಗಸ್ಟ್ 12 ರಂದು ಸಂಭವಿಸಲಿದೆ.
ಖಗೋಳಶಾಸ್ತ್ರದ ಪ್ರಕಾರ ಇದು ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಸ್ಪೇನ್, ರಷ್ಯಾ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದೆ. ಯುರೋಪ್, ಆಫ್ರಿಕಾ ಹಾಗೂ ಉತ್ತರ ಅಮೆರಿಕದ ಹಲವು ಭಾಗಗಳಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸುವುದಿಲ್ಲ.
NASA ಮಾಹಿತಿಯ ಪ್ರಕಾರ ಆಗಸ್ಟ್ 12ರ ಸೂರ್ಯಗ್ರಹಣದ ಗರಿಷ್ಠ ಹಂತವು ವಿದೇಶಿ ಕಾಲಮಾನ 5:45ರ ಸುಮಾರಿಗೆ ಸಂಭವಿಸಲಿದೆ. ಸಂಪೂರ್ಣ ಗ್ರಹಣದ ಗರಿಷ್ಠ ಅವಧಿ ಸುಮಾರು 2 ನಿಮಿಷ 18 ಸೆಕೆಂಡ್‌ಗಳಷ್ಟಿರಲಿದೆ
ಭೀಮನ ಅಮಾವಾಸ್ಯೆಯಂದೇ ಸೂರ್ಯಗ್ರಹಣ
ಈ ಬಾರಿ ಸೂರ್ಯಗ್ರಹಣವು ಭೀಮನ ಅಮಾವಾಸ್ಯೆಯ ದಿನದಂದೇ ಸಂಭವಿಸುತ್ತಿರುವುದು ಧಾರ್ಮಿಕವಾಗಿ ವಿಶೇಷ ಗಮನ ಸೆಳೆಯುತ್ತಿದೆ. ಭಾರತೀಯ ಸಂಪ್ರದಾಯದಲ್ಲಿ ಭೀಮನ ಅಮಾವಾಸ್ಯೆಗೆ ವಿಶೇಷ ಮಹತ್ವವಿದ್ದು, ಈ ದಿನ ಪೂಜೆ, ವ್ರತ ಮತ್ತು ದಾನಗಳನ್ನ ಮಾಡುವ ಪದ್ಧತಿ ಇದೆ.

ಭಾರತದಲ್ಲಿ ಗ್ರಹಣ ಗೋಚರಿಸದ ಕಾರಣ ಖಗೋಳಶಾಸ್ತ್ರದ ದೃಷ್ಟಿಯಿಂದ ಗ್ರಹಣ ವೀಕ್ಷಣೆ ಅಥವಾ ಅದರ ಆಧಾರದ ಮೇಲೆ ಯಾವುದೇ ವಿಶೇಷ ಆಚರಣೆ ಅಗತ್ಯವಿಲ್ಲ. ಆದರೆ ಧಾರ್ಮಿಕ ಹಾಗೂ ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಗ್ರಹಣಕ್ಕೆ ಸಂಬಂಧಿಸಿದ ಆಚರಣೆಗಳನ್ನ ಕೆಲವರು ಪಾಲಿಸುತ್ತಾರೆ.
ಗ್ರಹಣದ ಸಮಯ ಎಷ್ಟು?
ಜ್ಯೋತಿಷ್ಯ ಪರಂಪರೆಯಲ್ಲಿ ಗ್ರಹಣದ ಸ್ಪರ್ಶ, ಮಧ್ಯಕಾಲ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಸಮಯಗಳನ್ನು ಪರಿಗಣಿಸಲಾಗುತ್ತದೆ. ಸ್ಥಳೀಯ ಪಂಚಾಂಗದ ಆಧಾರದ ಮೇಲೆ ಪೂಜಾ ಸಮಯಗಳಲ್ಲಿ ವ್ಯತ್ಯಾಸ ಇರಬಹುದಾಗಿದೆ.
ಮುಖ್ಯವಾಗಿ: ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಆದ್ದರಿಂದ ಪೂಜೆ, ಆಹಾರ ಸೇವನೆ ಹಾಗೂ ಇತರ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಸಮಯವನ್ನು ಸ್ಥಳೀಯ ಪಂಚಾಂಗ ಅಥವಾ ಅರ್ಚಕರ ಸಲಹೆಯಂತೆ ನಿರ್ಧರಿಸುವುದು ಸೂಕ್ತ.

ಜ್ಯೋತಿಷ್ಯದಲ್ಲಿ ‘ಗ್ರಹಣ ಯೋಗ’ದ ಉಲ್ಲೇಖ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಸೂರ್ಯ, ಚಂದ್ರ ಮತ್ತು ರಾಹುವಿನ ಸಂಯೋಜನೆಯಿಂದ ‘ಗ್ರಹಣ ಯೋಗ’ ಉಂಟಾಗುತ್ತದೆ. ಆದರೆ ಇವು ಜ್ಯೋತಿಷ್ಯ ನಂಬಿಕೆಗಳು ಮಾತ್ರ; ಗ್ರಹಣದಿಂದ ಉದ್ಯೋಗ, ಆರ್ಥಿಕ ಪರಿಸ್ಥಿತಿ, ಆರೋಗ್ಯ, ಯುದ್ಧ ಅಥವಾ ಪ್ರಕೃತಿ ವಿಕೋಪಗಳು ಉಂಟಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಕೆಲವು ರಾಶಿಗಳಿಗೆ ಸವಾಲಿನ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಲಾಗಿದ್ದು, ಇನ್ನು ಕೆಲವು ರಾಶಿಗಳಿಗೆ ಶುಭಫಲ ಸಿಗಲಿದೆ ಎಂದು ಪರಿಗಣಿಸಲಾಗಿದೆ ಎಂದು ಜೋತಿಷ್ಯ ಶಾಸ್ತ್ರಜ್ಞರು ಹೇಳಿದ್ದಾರೆ.
ಯಾವ ರಾಶಿಗೆ ಏನು ಫಲ?
ಮೇಷ:
ತಾಯಿ ಆರೋಗ್ಯದ ಬಗ್ಗೆ ಆತಂಕ, ಮನಸ್ಥಿತಿಯಲ್ಲಿ ಏರುಪೇರು ಹಾಗೂ ಗುರುಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು.
ಪರಿಹಾರ:
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಗೋಧಿ ದಾನ ಮಾಡುವುದು.
ವೃಷಭ
ಕೆಲಸಗಳಲ್ಲಿ ಅಡಚಣೆ, ಹಿನ್ನಡೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹಾಗೂ ಹಿತಶತ್ರುಗಳಿಂದ ಎಚ್ಚರಿಕೆ ಅಗತ್ಯ.
ಪರಿಹಾರ:
ಅವರೆಕಾಳು ಮತ್ತು ಫಲತಾಂಬೂಲ ದಾನ, ದುರ್ಗಾ ಕವಚ ಪಠಣ, ಅನ್ನಪೂರ್ಣೇಶ್ವರಿ ಆರಾಧನೆ ಹಾಗೂ ಧ್ಯಾನ.
ಮಿಥುನ
ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರ, ವ್ಯವಹಾರದಲ್ಲಿ ಮೋಸ, ಕುಟುಂಬದಲ್ಲಿ ಕಲಹ ಹಾಗೂ ಮಾತಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಎನ್ನಲಾಗುತ್ತದೆ.
ಪರಿಹಾರ:
ವಿಷ್ಣು ಸಹಸ್ರನಾಮ ಪಾರಾಯಣ, ಗೋಧಿ ಹಾಗೂ ವಿವಿಧ ಧಾನ್ಯಗಳ ದಾನ.

ಕರ್ಕಾಟಕ
ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರಿಗೆ ಗ್ರಹಣದ ಪ್ರಭಾವ ಹೆಚ್ಚು ಎಂದು ಜ್ಯೋತಿಷ್ಯ ನಂಬಿಕೆ ಹೇಳುತ್ತದೆ. ದೈಹಿಕ-ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ ಹಾಗೂ ದುಡುಕಿನ ನಿರ್ಧಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ಪರಿಹಾರ:
ಅಕ್ಕಿ ಹಾಗೂ ಸಿಹಿ ಪದಾರ್ಥ ದಾನ, ಅನ್ನದಾನ, ಶಿವನ ದರ್ಶನ, ರುದ್ರಾಭಿಷೇಕ ಮತ್ತು ಕ್ಷೀರಾಭಿಷೇಕ.
ಸಿಂಹ
ಹಣಕಾಸಿನ ಮುಗ್ಗಟ್ಟು, ಬಡ್ಡಿ ವ್ಯವಹಾರದಲ್ಲಿ ಸಮಸ್ಯೆ ಹಾಗೂ ಈಗಾಗಲೇ ಆರೋಗ್ಯ ಸಮಸ್ಯೆ ಇರುವವರಿಗೆ ತೊಂದರೆ ಹೆಚ್ಚಾಗಬಹುದು.
ಪರಿಹಾರ:
ನವಗ್ರಹ ಪೂಜೆ, ನವಧಾನ್ಯ ಪೂಜೆ ಹಾಗೂ ದಾನ.
ಕನ್ಯಾ
ಹಣಕಾಸಿನ ವಿಚಾರದಲ್ಲಿ ಮೋಸ, ಸಾಲದ ಹೊರೆ ಹೆಚ್ಚಳ ಹಾಗೂ ರಿಯಲ್ ಎಸ್ಟೇಟ್ ಮತ್ತು ಆಭರಣ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.
ಪರಿಹಾರ:
ಭುವನೇಶ್ವರಿ ಮತ್ತು ಅನ್ನಪೂರ್ಣೇಶ್ವರಿ ದರ್ಶನ, ಸಿಹಿ ಪೊಂಗಲ್ ದಾನ.
ತುಲಾ
ಉದ್ಯೋಗ, ಕೆಲಸ ಮತ್ತು ವಿದ್ಯಾಭ್ಯಾಸದಲ್ಲಿ ಮನಸ್ಸಿನ ಒತ್ತಡ ಹೆಚ್ಚಾಗಬಹುದು.
ಪರಿಹಾರ:
ಗಣಪತಿ ಹಾಗೂ ದುರ್ಗಾರಾಧನೆ, ವಿಶೇಷ ಅರ್ಚನೆ.
ವೃಶ್ಚಿಕ
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಅನಗತ್ಯ ಭಯಪಡುವ ಅಗತ್ಯವಿಲ್ಲ.
ಪರಿಹಾರ:
ಸುಬ್ರಹ್ಮಣ್ಯ ಆರಾಧನೆ, ನಾಗಾರಾಧನೆ ಹಾಗೂ ಕಾಲಭೈರವೇಶ್ವರ ಆರಾಧನೆ.
ಧನು
ತಂದೆ-ತಾಯಿ ಅಥವಾ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇತರರ ಸಾಲಕ್ಕೆ ಭದ್ರತೆ ನೀಡುವುದು ಅಥವಾ ಕೈಸಾಲದ ವ್ಯವಹಾರದಲ್ಲಿ ತೊಡಗುವುದನ್ನು ತಪ್ಪಿಸಬೇಕು.
ಪರಿಹಾರ:
ಗುರುಶಾಂತಿ, ಗುರುಪೂಜೆ ಹಾಗೂ ಕಡಲೆಕಾಳು-ಫಲತಾಂಬೂಲ ದಾನ.
ಮಕರ
ಪ್ರೀತಿ ಸಂಬಂಧದಲ್ಲಿ ದೂರವಾಗುವಿಕೆ, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಹಾಗೂ ಶುಭಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು.
ಪರಿಹಾರ:
ಸರ್ವಮಂಗಳ ಮಂತ್ರ ಪಠಣ, ಪಂಚಮೂರ್ತಿ ಪೂಜೆ, ಗೋಧಿ ಮತ್ತು ಧಾನ್ಯಗಳ ದಾನ.
ಕುಂಭ
ಭಯ, ಆತಂಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಗಮನಹರಿಸಿ ಕುಟುಂಬದೊಂದಿಗೆ ಸಮಯ ಕಳೆಯುವುದು ಒಳಿತು.
ಪರಿಹಾರ:
ಶನೈಶ್ಚರ ಮಂತ್ರ ಜಪ ಹಾಗೂ ದಾನ.
ಮೀನ
ಗ್ರಹಣದ ಪ್ರಭಾವ ಕಡಿಮೆ ಎಂದು ಪರಿಗಣಿಸಲಾಗಿದ್ದು, ಆರೋಗ್ಯ ಹಾಗೂ ನೀರಿನ ಸಂಬಂಧಿತ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು.
ಪರಿಹಾರ:
ಗುರುಚರಿತ್ರೆ ಪಾರಾಯಣ, ಕಡಲೆಕಾಳು ದಾನ, ರಾಯರ ಹಾಗೂ ಸಾಯಿಬಾಬಾ ದರ್ಶನ.



