ಹೈದರಾಬಾದ್: ಶೀಘ್ರದಲ್ಲೇ ಭಾರತದಲ್ಲಿ ಬುಲೆಟ್ ರೈಲುಗಳ ಸಂಚಾರ ಆರಂಭವಾಗಲಿದೆ. ಮುಂಬೈ – ಅಹಮದಾಬಾದ್ ನಡುವಿನ ಮೊದಲ ಬುಲೆಟ್ ರೈಲಿನ (Bullet Train) ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ ಘೋಷಿಸಿದ್ದಾರೆ.
ಬುಲೆಟ್ ರೈಲಿನ ಮೊದಲ ವಿಭಾಗವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ (Mumbai-Ahmedabad High-Speed Rail (MAHSR) corridor) ಅನ್ನು ಒಂದೇ ಬಾರಿಗೆ ತೆರೆಯುವ ಬದಲು ಹಂತ-ಹಂತವಾಗಿ ತೆರೆಯಲಾಗುವುದು. ಸೂರತ್-ಬಿಲಿಮೋರಾ ವಿಭಾಗವನ್ನ ಪ್ರಾರಂಭಿಸಿದ ನಂತರ, ಉಳಿದ ಮಾರ್ಗಗಳನ್ನ ಆರಂಭಿಸಲಾಗುತ್ತದೆ.

ಮುಂದಿನ ವರ್ಷ ಸೂರತ್ ಮತ್ತು ಬಿಲಿಮೋರಾ ನಡುವಿನ ಬುಲೆಟ್ ರೈಲಿನ ಮೊದಲ ವಿಭಾಗವನ್ನ ಆರಂಭಿಸಲಿದ್ದೇವೆ. ಅದರ ನಂತರ ವಾಪಿಯಿಂದ ಸೂರತ್, ನಂತರ ವಾಪಿಯಿಂದ ಅಹಮದಾಬಾದ್, ಅಹಮದಾಬಾದ್ ನಿಂದ ಥಾಣೆ ಮತ್ತು ಅಹಮದಾಬಾದ್ ನಿಂದ ಮುಂಬೈಗೆ ಮಾರ್ಗಗಳನ್ನ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ. ರೈಲ್ವೆ ಸಚಿವಾಲಯವು ಅಶ್ವಿನಿ ಅವರ ಹೇಳಿಕೆಯ ವೀಡಿಯೊವನ್ನ ಜಾಲತಾಣದಲ್ಲಿ ಹಂಚಿಕೊಂಡಿದೆ.
ʻಪುಣೆ ಮತ್ತು ಹೈದರಾಬಾದ್ ನಡುವಿನ ಮೊದಲ ಯೋಜನೆಯು ಪ್ರಯಾಣದ ಸಮಯವನ್ನ 2 ಗಂಟೆಗಳಿಗೆ ಇಳಿಸುತ್ತದೆ. ಅಷ್ಟೇ ಅಲ್ಲದೇ, ಹೈದರಾಬಾದ್‌ನಿಂದ ಮುಂಬೈ ಪ್ರಯಾಣವನ್ನು 2 ಗಂಟೆ 50 ನಿಮಿಷಗಳಿಗೆ, ಹೈದರಾಬಾದ್‌ನಿಂದ ಅಮರಾವತಿ ಪ್ರಯಾಣವನ್ನು 1 ಗಂಟೆ 10 ನಿಮಿಷಕ್ಕೆ, ಹೈದರಾಬಾದ್‌ನಿಂದ ಚೆನ್ನೈ ಪ್ರಯಾಣವನ್ನು 3 ಗಂಟೆಗಳಿಗೆ ಮತ್ತು ಹೈದರಾಬಾದ್‌ನಿಂದ ಬೆಂಗಳೂರು ಪ್ರಯಾಣವನ್ನು 2 ಗಂಟೆ 35 ನಿಮಿಷಗಳಿಗೆ ಇಳಿಸುತ್ತದೆʼ ಎಂದು ವಿಡಿಯೋನಲ್ಲಿ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ಗೆ 3 ಹೈ-ಸ್ಪೀಡ್ ಬುಲೆಟ್ ರೈಲು ಕಾರಿಡಾರ್‌ಗಳನ್ನ ನೀಡಿದ್ದಾರೆ. ಈ 3 ಪ್ರಮುಖ ಬುಲೆಟ್ ರೈಲು ಕಾರಿಡಾರ್‌ಗಳ ಉದ್ಘಾಟನೆಯೊಂದಿಗೆ ಹೈದರಾಬಾದ್ ʻಹೈ-ಸ್ಪೀಡ್ ಹಬ್ʼ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಿಟ್ಟ 5,400 ಕೋಟಿ ರೂ. ಬೃಹತ್ ರೈಲ್ವೆ ಬಜೆಟ್, ತೆಲಂಗಾಣಕ್ಕೆ ಕ್ರಾಂತಿಕಾರಿ ಬದಲಾವಣೆಗಳನ್ನ ತರುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಪುಣೆಯಿಂದ ಹೈದರಾಬಾದ್, ಹೈದರಾಬಾದ್ ನಿಂದ ಚೆನ್ನೈ, ಮತ್ತು ಹೈದರಾಬಾದ್ ನಿಂದ ಬೆಂಗಳೂರು – ಇದು ಇಡೀ ಪ್ರದೇಶಕ್ಕೆ ಪ್ರಮುಖ ಬದಲಾವಣೆ ತರಲಿದೆ. ಹೈದರಾಬಾದ್ ಅತಿ ವೇಗದ ಕೇಂದ್ರವಾಗಲಿದೆ. ಜೊತೆಗೆ ಇಲ್ಲಿನ ಅಭಿವೃದ್ಧಿಗೆ ನೆರವಾಗಲಿದೆ. ಇಡೀ ಪ್ರದೇಶದ ಆರ್ಥಿಕತೆಗಳು ಪರಸ್ಪರ ಸಹಕಾರವಾಗಿರುತ್ತವೆ ಎಂದು ಸಚಿವರು ಬಣ್ಣಿಸಿದ್ದಾರೆ.
