– 12 ಗಂಟೆಗಳಿಗೂ ಹೆಚ್ಚು ಕಾಲ ನೀರು ಪೋಲು, ರೈತರ ಜಮೀನು ಜಲಾವೃತ
– ನೀರು ಹರಿಸುವ ಮುನ್ನವೇ ಒಡೆಯುತ್ತಿರುವ ಪೈಪ್‌ಲೈನ್‌ಗಳು
ಹಾಸನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಒಡೆದು (Yettinahole Project Pipeline Leak) ಅಪಾರ ಪ್ರಮಾಣ ನೀರು ಪೋಲಾದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು ರೈತರ (Farmers) ಜಮೀನುಗಳು ಜಲಾವೃತಗೊಂಡಿದ್ದು ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ನೀರು ಹರಿದು ಹೋಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ಪೂರ್ಣಗೊಂಡು ನೀರು ಹರಿಸುವ ಮುನ್ನವೇ ಪೈಪ್‌ಲೈನ್‌ಗಳು ಒಡೆಯುತ್ತಿರುವುದರಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಯಲಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇದನ್ನೂ ಓದಿ: ಜು.13ರಿಂದ ಬರಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ

2008 ರಲ್ಲಿ 8,000 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಯೋಜನೆಯ ಮೊತ್ತ ಇದೀಗ 23 ಸಾವಿರ ಕೋಟಿಗೆ ಏರಿಕೆಯಾಗಿದೆ. ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಮೊದಲ ಹಂತದ ನೀರೆತ್ತುವ ಯೋಜನೆ ಉದ್ಘಾಟನೆಗೊಂಡು 2 ವರ್ಷಗಳು ಕಳೆದರೂ ಯಾವ ಜಿಲ್ಲೆಗಳಿಗೂ ನೀರು ಹರಿಸಲು ಸಾಧ್ಯವಾಗಿಲ್ಲ. ಆದರೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ನೀರಿನ ಒತ್ತಡ ತಡೆಯದೇ ಪೈಪ್‌ಲೈನ್‌ಗಳ ಜೋಡಣೆ ಕಿತ್ತು ಬರುತ್ತಿವೆ.
ಈ ಹಿಂದೆ ಸಕಲೇಶಪುರ ತಾಲ್ಲೂಕಿನ, ದೇಕ್ಲಾ ಗ್ರಾಮದ ಬಳಿ ಪೈಪ್‌ಲೈನ್ ಜೋಡಣೆ ಬಿಟ್ಟು ರಸ್ತೆ ಕೊಚ್ಚಿ ಹೋಗಿತ್ತು. ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ತಡರಾತ್ರಿ ಹಲಸುಲಿಗೆ ಗ್ರಾಮದ ಬಳಿ ಪೈಪ್‌ಲೈನ್ ಒಡೆದಿದೆ. ನೀರಿನ ಶಬ್ಧಕ್ಕೆ ಸ್ಥಳೀಯರು ಆತಂಕಗೊಂಡಿದ್ದು, ಬೆಳಗ್ಗೆ ರೈತರು ತಮ್ಮ ಜಮೀನಿಗಳಿಗೆ ತೆರಳುತ್ತಿದ್ದ ವೇಳೆ ಬಾನೆತ್ತರಕ್ಕೆ ನೀರು ಚಿಮ್ಮುತ್ತಿರುವುದನ್ನ ಕಂಡು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ರೈತರು ಜಮೀನಿಗಳಿಗೆ ತೆರಳುವ ರಸ್ತೆಗೆ ನೀರು ಬಲವಾಗಿ ಚಿಮ್ಮುತ್ತಿದ್ದ ಕಾರಣ ರೈತರು ಜಮೀನಿಗೆ ತೆರಳಲು ಪರದಾಡಬೇಕಾಯಿತು.

ಅಲ್ಲದೇ ಎತ್ತಿನಹೊಳೆ ಯೋಜನೆಗೆ ವಿದ್ಯುತ್ ಪೂರೈಸುವ 220 ಕೆವಿಯ ವಿದ್ಯುತ್ ತಂತಿಗಳು, ಟವರ್‌ಗಳಿಗೂ ನೀರು ಬೀಳುತ್ತಿದ್ದು ಸುದ್ದಿ ತಿಳಿದ ಕೂಡಲೇ ಚೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಆಗುವ ಅಪಾಯ ತಪ್ಪಿಸಿದ್ದಾರೆ. ಕಳೆದ 4-5 ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಸುರಿದಿದ್ದರಿಂದ ಕೆಂಪುಹಳ್ಳದಲ್ಲಿ ಭಾರಿ ನೀರು ಹರಿಯುತ್ತಿದ್ದು ಪ್ರಾಯೋಗಿಕವಾಗಿ ಹಳೇಬೀಡು ಕೆರೆಗೆ ನೀರು ಹರಿಸಲಾಗಿದ್ದು, ಕೆರೆ ಕೋಡಿ ಬಿದ್ದು ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ.
ಗುರುತ್ವಾಕರ್ಷಣೆ ಮೂಲಕ ಬೃಹತ್ ಪೈಪ್‌ಗಳಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಪೈಪ್‌ಲೈನ್‌ಗಳು ಬಿರುಕು ಬಿಡುತ್ತಿದ್ದು, ನೀರು ಪೋಲಾಗುತ್ತಿದೆ. ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ರೈತರ ಬೆಳೆ ಹಾನಿಯಾಗಿದ್ದರೆ ಸೂಕ್ತ ಪರಿಹಾರ ನೀಡುವಂತೆ ಎತ್ತಿನಹೊಳೆ ಯೋಜನೆ ಇಂಜಿನಿಯರ್‌ಗೆ ಸೂಚನೆ ನೀಡಿದರು. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದ್ದು, ಯೋಜನೆ ಪೂರ್ಣಗೊಂಡು ಸಂಪೂರ್ಣ ನೀರು ಹರಿಸಿದರೆ ಹಲವೆಡೆ ಪೈಪ್‌ಲೈನ್‌ಗಳು ಒಡೆಯುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾರವಾರ ಬಂದರಿನಲ್ಲಿ ಹಡಗಿನಿಂದ ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರಕ್ಕೆ ಸೋರಿಕೆ
ಒಟ್ಟಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಆರಂಭಗೊಂಡು ಒಂದೂವರೆ ದಶಕ ಕಳೆದರು ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ನಡುವೆ ಪ್ರಾಯೋಗಿಕವಾಗಿ ನೀರು ಹರಿಸುತ್ತಿದ್ದು ಅಧಿಕ ಒತ್ತಡದಿಂದ ಪೈಪ್‌ಗಳು ಬಿರುಕು ಹಾಗೂ ಒಡೆದು ಹಲವು ಅನಾಹುತಗಳು ಸೃಷ್ಟಿಯಾಗುತ್ತಿದ್ದು, ಇದರ ತಡೆಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.
