– ಟಿವಿಕೆ ಸರ್ಕಾರಕ್ಕೆ ಕೋರ್ಟಲ್ಲಿ ಗೆಲುವು
ಚೆನ್ನೈ: ತಮಿಳುನಾಡಿನ (Tamilnadu) ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗಿಂತ ಮೊದಲು ತಮಿಳು ರಾಜ್ಯ ಗೀತೆ ಹಾಡಲು ಮದ್ರಾಸ್ ಹೈಕೋರ್ಟ್ (Madras High Court) ಅನುಮತಿ ನೀಡಿದೆ. ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯು ಪ್ರಕಾರ ರಾಜ್ಯ ಗೀತೆಯನ್ನು ಕೊನೆಯ ಸ್ಥಾನಕ್ಕೆ ತಳ್ಳುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಚೆನ್ನೈನ ಅನ್ಯಾ ರಾಧಾಕೃಷ್ಣನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ವೇಳೆ ಈ ಸ್ಪಷ್ಟನೆ ನೀಡಲಾಗಿದೆ. ತಮಿಳುನಾಡಿನಲ್ಲಿ ಸರ್ಕಾರಿ ಕಾರ್ಯಕ್ರಮಗಳು ರಾಜ್ಯ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳುವ ದೀರ್ಘಕಾಲದ ಸಂಪ್ರದಾಯವಿದೆ. ಜ.28ರಂದು ಹೊರಡಿಸಲಾದ ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯ ಪ್ರಕಾರ, ಸರ್ಕಾರದ ಕಾರ್ಯಕ್ರಮಗಳು ವಂದೇ ಮಾತರಂದೊಂದಿಗೆ ಆರಂಭವಾಗಬೇಕು ಎಂದಿರುವುದನ್ನು ಪ್ರಶ್ನಿಸಿ, ರದ್ದುಗೊಳಿಸುವಂತೆ ಕೋರಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ದೆಹಲಿಯ ಸಿಎನ್‌ಜಿ ಸ್ಟೇಷನ್‌ನಲ್ಲಿ ಭಾರೀ ಸ್ಫೋಟ – ಮೂವರು ಸಾವು
ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಜು.9ರಂದು ಕೇಂದ್ರ ಗೃಹ ಸಚಿವಾಲಯದಿಂದ ಹೊರಡಿಸಲಾದ ಹೊಸ ಅಧಿಸೂಚನೆಯನ್ನು ಉಲ್ಲೇಖಿಸಿದರು. ಈ ಅಧಿಸೂಚನೆಯು ವಂದೇ ಮಾತರಂ ಮತ್ತು ರಾಷ್ಟ್ರಗೀತೆಯನ್ನು ಒಂದರ ನಂತರ ಒಂದರಂತೆ ಹಾಡಬೇಕೆಂದು ಕಡ್ಡಾಯಗೊಳಿಸುತ್ತದೆ ಹಾಗೂ ವಂದೇ ಮಾತಂ ರಾಷ್ಟ್ರಗೀತೆಯ ಮುಂಚಿತವಾಗಿ ಬರಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಈ ಅಧಿಸೂಚನೆಯು ರಾಜ್ಯ ಗೀತೆಗಳ ಬಗ್ಗೆ ಏನನ್ನೂ ಹೇಳಿಲ್ಲ ಮತ್ತು ರಾಜ್ಯ ಗೀತೆಯನ್ನು ಕೊನೆಯಲ್ಲಿ ಹಾಡಬೇಕು ಎಂದು ಸೂಚಿಸಿಲ್ಲ ಎಂದು ತಿಳಿಸಿದರು.

