– ಕೊನೇ ಪಂದ್ಯದಲ್ಲಿ ಕಳಪೆ ಬೌಲಿಂಗ್, ಫೀಲ್ಡಿಂಗ್‌ಗೆ ಬೆಲೆ ತೆತ್ತ ಭಾರತ
ಚಂಡೀಗಢ: ಕೊನೆಯವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಅಖಾಡದಲ್ಲಿ ವೆಸ್ಟ್‌ಇಂಡೀಸ್ ತಂಡವು ಟೀಂ ಇಂಡಿಯಾ ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ವಿಂಡೀಸ್ ವೈಟ್‌ವಾಶ್‌ನಿಂದ ತಪ್ಪಿಸಿಕೊಂಡಿದೆ. ಆದ್ರೆ ಆರಂಭಿಕ 2 ಪಂದ್ಯಗಳಲ್ಲೇ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಸರಣಿ ಕೈವಶ ಮಾಡಿಕೊಂಡಿದೆ.
ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಹಿನ್ನಡೆಯ ಹೊರೆತಾಗಿಯೂ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 351 ರನ್ ಪೇರಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ವೆಸ್ಟ್‌ಇಂಡೀಸ್ 5 ವಿಕೆಟ್ ನಷ್ಟಕ್ಕೆ 352 ರನ್ ಬಾರಿಸಿ ಇನ್ನೂ 10 ಎಸೆತಗಳಿರುವಾಗಲೇ ಗೆಲುವು ಸಾಧಿಸಿತು.
ಇದು ಒಂದುಕಡೆಯಾದ್ರೆ, ಈ ಜಯದೊಂದಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್ ಮಾಡಿದ ದಾಖಲೆಯನ್ನೂ ವಿಂಡೀಸ್ ಬರೆಯಿತು. 2019ರ ಮೇ ನಲ್ಲಿ ಐರ್ಲೆಂಡ್ ವಿರುದ್ಧ 331 ರನ್‌ಗಳ ಚೇಸಿಂಗ್ ವಿಂಡೀಸ್ ಪಾಲಿನ ಈವರೆಗಿನ ದಾಖಲೆಯಾಗಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದಿದೆ.

ಚೇಸಿಂಗ್ ಆರಂಭಿಸಿದ ವಿಂಡೀಸ್ 41 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ 2ನೇ ವಿಕೆಟ್‌ಗೆ ಉತ್ತಮ ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. 2ನೇ ವಿಕೆಟ್‌ಗೆ ಆರಂಭಿಕ ಆಟಗಾರ ಶಾಯಿಹೋಪ್ ಹಾಗೂ ಅಮಿರ್ ಜಂಗೋ ಶತಕದ ಜೊತೆಯಾಟ ನೀಡುವ ಮೂಲಕ ತಂಡದಲ್ಲಿ ಗೆಲುವಿನ ಭರವಸೆ ಹೆಚ್ಚಿಸಿದ್ರು. 100 ಎಸೆತಗಳಲ್ಲಿ ಈ ಜೋಡಿ 109 ರನ್‌ಗಳ ಜೊತೆಯಾಟ ನೀಡಿತು. ಆ ಬಳಿಕ ಸ್ಫೋಟಕ ಪ್ರದರ್ಶನಕ್ಕೆ ಯತ್ನಿಸುತ್ತಿದ್ದ ಜಂಗೋ ರನೌಟ್‌ಗೆ ತುತ್ತಾಗಿ ಪೆವಿಲಿಯನ್‌ಗೆ ಮರಳಿದ್ರು. ಆ ಬಳಿಕ ಶೆರ್ಫಾನ್ ರುಥೇರ್ಫೊರ್ಡ್ 24 ರನ್, ಕೀಮೋ ಪಾಲ್ 44 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ಇನ್ನಷ್ಟು ನೆರವಾದರು.
ʻಹೋಪ್ʼ ಕಳೆದುಕೊಳ್ಳದ ವಿಂಡೀಸ್
ಆರಂಭಿಕ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ವಿಂಡೀಸ್ ಈ ಪಂದ್ಯದಲ್ಲಿ ಗೆಲ್ಲಲೇಬೇಕೆಂಬ ʻಹೋಪ್ʼನೊಂದಿಗೆ ಕಣಕ್ಕಿಳಿದಿತ್ತು. ಬೃಹತ್ ಚೇಸ್ ಬೆನ್ನಟ್ಟಿದ ವಿಂಡೀಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಶಾಯಿ ಹೋಪ್ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಇದರೊಂದಿಗೆ ವಿಂಡೀಸ್ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಚೇಸಿಂಗ್ ಮಾಡಿದ ದಾಖಲೆಯನ್ನೂ ಹೆಗಲಿಗೇರಿಸಿಕೊಂಡಿತು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಹೋಪ್ 143 ಎಸೆತಗಳಲ್ಲಿ 162 ರನ್ (3 ಸಿಕ್ಸರ್, 17 ಬೌಂಡರಿ) ಬಾರಿಸಿದರು. ಇನ್ನೂ ಮ್ಯಾಥ್ಯೂ ಫೋರ್ಡೆ 7 ರನ್, ಕೊನೆಯಲ್ಲಿ ಗುಡಕೇಶ್ ಮೋಟಿ 19 ರನ್ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ 4 ರನ್‌ಗಳಿಗೆ ಪ್ರಮುಖ (ಗಿಲ್, ಕೊಹ್ಲಿ) 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 10 ಓವರ್ ಕಳೆದರೂ 50 ರನ್ ಗಳಿಸದ ಭಾರತಕ್ಕೆ ಬೃಹತ್ ಮೊತ್ತ ಕಲೆಹಾಕುವುದು ಸವಾಲಿನ ಕೆಲಸವಾಗಿತ್ತು. 200 – 250 ರನ್‌ಗಳಿಸಿದ್ರೆ ಅದೇ ಹೆಚ್ಚೆಂದು ಭಾವಿಸಲಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಸಿಕ್ಸರ್, ಬೌಂಡರಿ ಸಿಡಿಸುತ್ತಾ ನಿರಾಯಾಸವಾಗಿ ರನ್ ಕಲೆಹಾಕುತ್ತಾ ಸಾಗಿದರು. ಇದಕ್ಕೆ ಮತ್ತೊಂದು ಕಡೆ ರುತುರಾಜ್ ಗಾಯಕ್ವಾಡ್ ನಿಂತು ಸಾಥ್ ನೀಡಿದರು.

ಆದ್ರೆ ಶತಕದ ಅಂಚಿನಲ್ಲಿದ್ದಾಗ ರೋಹಿತ್ (92 ರನ್) ಔಟಾದರು. ಈ ಬೆನ್ನಲ್ಲೇ ಅರ್ಧಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಕೂಡ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ರನ್ ವೇಗ ಕಡಿತಗೊಂಡಿತ್ತು. ಆದ್ರೆ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ರಾಹುಲ್ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಕೊನೆಯವರೆಗೂ ಅಜೇಯರಾಗುಳಿದ ರಾಹುಲ್ 80 ಎಸೆತಗಳಲ್ಲಿ ಶತಕ ದಾಖಲಿಸಿದರು. ಒಟ್ಟು 87 ಎಸೆತಗಳನ್ನ ಎದುರಿಸಿ 129 ರನ್ (6 ಸಿಕ್ಸರ್, 10 ಬೌಂಡರಿ) ಚಚ್ಚಿದರು. ಈ ಮೂಲಕ ತಂಡದ ಮೊತ್ತವನ್ನು 350 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.


