ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಎಸ್. ಬುದೂರು ನಿರ್ಮಿಸಿರುವ, ಪಿ.ಸಿ. ಶೇಖರ್ ನಿರ್ದೇಶನದ, ವಿಜಯ ರಾಘವೇಂದ್ರ ನಾಯಕನಾಗಿ ನಟಿಸಿರುವ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ‘ಮಹಾನ್’ ಚಿತ್ರದ ಎರಡನೇ ಹಾಡು ‘ನಾನೇ ನಾನೇ ರೈತ’ ಇತ್ತೀಚೆಗೆ ಬಿಡುಗಡೆಯಾಯಿತು. ರೈತಪರ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ ಹಾಗೂ ಮಂಜು ಕಿರಣ್ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಮ್ಮ ದೇಶದಲ್ಲಿ ಎರಡು ಭಾರತಗಳಿವೆ. ಒಂದು ಜಗಮಗಿಸುವ ನಗರ ಭಾರತವಾದರೆ, ಮತ್ತೊಂದು ರೈತರ ಶ್ರಮ ಮತ್ತು ಬೆವರಿನಿಂದ ಬದುಕುತ್ತಿರುವ ಹಳ್ಳಿಗಳ ಭಾರತ. ನಮ್ಮ ಊಟದ ತಟ್ಟೆಗೆ ಅನ್ನ, ತರಕಾರಿ ತಂದುಕೊಡುವ ರೈತರ ಕಷ್ಟ, ಪರಿಶ್ರಮ ಹಾಗೂ ಸಂಕಷ್ಟಗಳನ್ನು ನಗರ ಭಾರತ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು. ರೈತರ ಬದುಕು, ಹೋರಾಟ ಮತ್ತು ಕೃಷಿಯ ಮಹತ್ವವನ್ನು ಸಮಾಜ ಗುರುತಿಸಬೇಕು ಎಂದರು. ಇದನ್ನೂ ಓದಿ: ‘ಕುರುಡು ಕಾಂಚಾಣ’ ಚಿತ್ರದ ಸಾಂಗ್ ರಿಲೀಸ್ ಮಾಡಿದ ಜಗ್ಗೇಶ್ ಪತ್ನಿ ಪರಿಮಳಾ
ಮಂಜು ಕಿರಣ್ ಮಾತನಾಡಿ, ರೈತರ ಶ್ರಮದಿಂದಲೇ ದೇಶದ ಬದುಕು ಸಾಗುತ್ತಿದೆ. ರೈತರ ಸಂಕಷ್ಟ ಮತ್ತು ಅವರ ಪರಿಶ್ರಮಕ್ಕೆ ಸಮಾಜ ಗೌರವ ನೀಡಬೇಕು. ರೈತರ ಪರವಾದ ಕಾಳಜಿ ಹಾಗೂ ಹೋರಾಟದ ಆಶಯವನ್ನು ಹೊತ್ತಿರುವ ಈ ಚಿತ್ರಗೀತೆ ಉತ್ತಮ ಪ್ರಯತ್ನವಾಗಿದ್ದು, ‘ಮಹಾನ್’ ಚಿತ್ರವನ್ನು ಎಲ್ಲ ರೈತರೂ ನೋಡಬೇಕು ಎಂದು ಮನವಿ ಮಾಡಿದರು. ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಗೀತೆಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಜಯ ಪ್ರಕಾಶ್ ಹಾಗೂ ಕೈಲಾಶ್ ಖೇರ್ ಹಾಡಿದ್ದಾರೆ. ‘ಸರಿಗಮ’ ಮ್ಯೂಸಿಕ್ ಚಾನೆಲ್ನಲ್ಲಿ ಹಾಡು ಬಿಡುಗಡೆಯಾಗಿದೆ. ಚಿತ್ರದ ಮೊದಲ ಹಾಡು ‘ಒಡಹುಟ್ಟಿದವಳೆ’ ಈಗಾಗಲೇ 75 ಮಿಲಿಯನ್ ವೀಕ್ಷಣೆಗಳನ್ನು ದಾಟಿ 100 ಮಿಲಿಯನ್ ವೀಕ್ಷಣೆಗಳತ್ತ ಸಾಗುತ್ತಿದ್ದು, ‘ನಾನೇ ನಾನೇ ರೈತ’ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಿರ್ದೇಶಕ ಪಿ.ಸಿ. ಶೇಖರ್ ಮಾತನಾಡಿ, ಸುಮಾರು ಹತ್ತು ವರ್ಷಗಳ ಹಿಂದೆ ರೈತರೊಬ್ಬರ ಆತ್ಮಹತ್ಯೆಯ ಸುದ್ದಿ ಓದಿದಾಗ ಸ್ನೇಹಿತರು ಅದನ್ನು ಸಾಮಾನ್ಯ ಸುದ್ದಿಯಂತೆ ಪರಿಗಣಿಸಿದ್ದು ತಮ್ಮ ಮನಸ್ಸಿನಲ್ಲಿ ಉಳಿಯಿತು. ರೈತರ ಸಾವು ಸಾಮಾನ್ಯವೇ ಎಂಬ ಪ್ರಶ್ನೆಯಿಂದ ರೈತರ ಬದುಕಿನ ಬಗ್ಗೆ ಅಧ್ಯಯನ ನಡೆಸಿ ಈ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದೆ ಎಂದರು. ನಾವು ಸೇವಿಸುವ ಪ್ರತಿಯೊಂದು ತುತ್ತಿನಲ್ಲೂ ರೈತರ ಪರಿಶ್ರಮವಿದೆ. ಸೈನಿಕರಿಗೆ ನೀಡುವ ಗೌರವದಂತೆಯೇ ರೈತರಿಗೂ ಗೌರವ ಸಿಗಬೇಕು. ಕೃಷಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಅವರ ಪರಿಶ್ರಮಕ್ಕೆ ಗುರುತಿಸುವಿಕೆ ಸಿಗಬೇಕು. ಮಹಿಳಾ ರೈತೆಯ ಮೂಲಕ ಕಥೆ ಹೇಳಿ, ರೈತರ ಬದುಕು ಹಾಗೂ ಮಹಿಳಾ ಸಬಲೀಕರಣದ ವಿಚಾರವನ್ನು ಮನರಂಜನಾತ್ಮಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ‘ನಾನೇ ನಾನೇ ರೈತ’ ಹಾಡಿನಲ್ಲಿ ರೈತರ ಬದುಕು, ಸಂತೋಷ, ದುಃಖ ಮತ್ತು ಸ್ವಾಭಿಮಾನವನ್ನು ಅವರದೇ ಧ್ವನಿಯಲ್ಲಿ ಹೇಳಲಾಗಿದೆ. ಈ ಹಾಡನ್ನು ಎಲ್ಲ ರೈತರಿಗೆ ಸಮರ್ಪಿಸುತ್ತೇನೆ ಎಂದರು. ಇದನ್ನೂ ಓದಿ:ಭಾರತದಲ್ಲೇ 1,000 ಕೋಟಿ ಕಲೆಕ್ಷನ್ ಸಮೀಪದಲ್ಲಿ ರಾಮಾಯಣ; ಬಾಹುಬಲಿ-2 ಗಳಿಕೆ ಬ್ರೇಕ್ಗೆ ಕೌಂಟ್ಡೌನ್
ನಾಯಕ ವಿಜಯ ರಾಘವೇಂದ್ರ ಮಾತನಾಡಿ, ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದ್ದು, ಎಲ್ಲ ಕಲಾವಿದರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ರೈತರ ಸಮಸ್ಯೆಗಳ ಜೊತೆಗೆ ಮಾನವೀಯ ಭಾವನೆಗಳನ್ನೂ ಸಿನಿಮಾ ಹೇಳುತ್ತದೆ. ಚಿತ್ರವನ್ನು ನೋಡಿದ ನಂತರ ರೈತರ ಬದುಕು ಮತ್ತು ಹಕ್ಕುಗಳ ಬಗ್ಗೆ ಚರ್ಚೆ ಆರಂಭವಾಗಬೇಕು ಎಂದರು. ನಿರ್ಮಾಪಕ ಪ್ರಕಾಶ್ ಎಸ್. ಬುದೂರು ಮಾತನಾಡಿ, ರೈತರಿಗಾಗಿ ಹಾಡು ಮಾಡುವ ವಿಚಾರ ಬಂದಾಗ ತಕ್ಷಣ ಒಪ್ಪಿಕೊಂಡೆ. ರೈತರ ಬದುಕು, ಶ್ರಮ ಮತ್ತು ಹೋರಾಟಗಳು ಎಲ್ಲರಿಗೂ ಮಾದರಿಯಾಗಬೇಕು. ರೈತರು ತಮ್ಮ ಹಕ್ಕುಗಳನ್ನು ಅರಿತು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯ ಚಿತ್ರದಲ್ಲಿದೆ ಎಂದರು. ಅಲಯನ್ಸ್ ವಿಶ್ವವಿದ್ಯಾಲಯದ ಪ್ರೊ ವೈಸ್ ಚಾನ್ಸಲರ್ ಆಗಿರುವ ಅವರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಫ್ಯಾಕಲ್ಟಿ ಸದಸ್ಯರು ಸಿನಿಮಾದ ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು. ಆಕಾಶ ಪಿಕ್ಚರ್ಸ್ ವತಿಯಿಂದ ಸುಮಾರು 12 ಸಾವಿರ ಮರಗಳನ್ನು ನೆಟ್ಟಿರುವುದಾಗಿಯೂ ಹೇಳಿದರು.
ನಟಿ ವರ್ಷ ಬೊಳ್ಳಮ್ಮ ಮಾತನಾಡಿ, ನಗರೀಕರಣದ ನಡುವೆ ರೈತರ ಮಹತ್ವವನ್ನು ನಾವು ಮರೆತಿದ್ದೇವೆ. ಕೆಲವೇ ದಿನ ಬಿಸಿಲಿನಲ್ಲಿ ಚಿತ್ರೀಕರಣ ಮಾಡುವುದು ನಮಗೆ ಕಷ್ಟವಾದರೂ ರೈತರು ಪ್ರತಿದಿನ ಅದೇ ಬಿಸಿಲಿನಲ್ಲಿ ದುಡಿಯುತ್ತಾರೆ. ಅವರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು. ನಟಿ ರಾಧಿಕಾ ನಾರಾಯಣ್ ಮಾತನಾಡಿ, ರೈತರ ಸಂಕಷ್ಟ ಮತ್ತು ಹೋರಾಟಗಳನ್ನು ಉಪದೇಶದ ರೀತಿಯಲ್ಲಿ ಹೇಳದೆ, ಒಳ್ಳೆಯ ಕಥೆಯ ಮೂಲಕ ಪ್ರಸ್ತುತಪಡಿಸಿರುವುದು ಚಿತ್ರದ ವಿಶೇಷ. ಕಥೆ ಕೇಳಿದ ತಕ್ಷಣವೇ ಅಭಿನಯಿಸಲು ಒಪ್ಪಿಕೊಂಡೆ ಎಂದರು. ಕಾರ್ಯಕ್ರಮದಲ್ಲಿ ಡಾ. ವಿ. ನಾಗೇಂದ್ರ ಪ್ರಸಾದ್ ಹಾಡಿನ ಸಾಹಿತ್ಯದ ಕುರಿತು ಮಾಹಿತಿ ನೀಡಿದರು. ನಟ ಮಿತ್ರ, ಹಿರಿಯನಟ ರಮೇಶ್ ಭಟ್ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು. ಇದನ್ನೂ ಓದಿ: ವಿಜಯಲಕ್ಷ್ಮಿ ಮ್ಯಾನೇಜರ್ಗೆ ಬೈದಿದ್ದು ನಿಜ: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಧನ್ವೀರ್

