ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭೂಕಂಪ (Earthquake) ಸಂಭವಿಸಿದ್ದು, ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಲಾಸ್ ಏಂಜಲೀಸ್ (Los Angeles) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ (LAX) ಸಹ ಇದರ ಬಿಸಿ ತಟ್ಟಿದೆ. ಭೂಕಂಪನದ ವೇಳೆ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್ ಆಗಲು ಸಜ್ಜಾಗಿದ್ದು, ಭೂಕಂಪನದ ಮಾಹಿತಿ ತಿಳಿಯುತ್ತಿದ್ದಂತೆ ಮತ್ತೆ ಪೈಲಟ್ ವಿಮಾನವನ್ನು ಮೇಲೆ ಕೊಂಡೊಯ್ದಿದ್ದಾರೆ.
ವಿಮಾನ ಲ್ಯಾಂಡ್ ಆಗಲು ರನ್ವೇಗೆ ಸಮೀಪಿಸಿರುವುದು, ಈ ವೇಳೆ ಭೂಕಂಪನದಿಂದ ವಿಮಾನ ನಿಲ್ದಾಣ ಕಂಪಿಸಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಮಾನ ರನ್ವೇಗೆ ಸಮೀಪಿಸುತ್ತಿದ್ದಂತೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ವಾಯು ಸಂಚಾರ ನಿಯಂತ್ರಕರು, ಲ್ಯಾಂಡಿಂಗ್ಗೆ ಸಜ್ಜಾಗಿದ್ದ ವಿಮಾನಕ್ಕೆ ಈ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಪೈಲಟ್ ಲ್ಯಾಂಡಿಗ್ನ್ನು ಸ್ಥಗಿತಗೊಳಿಸಿದ್ದಾರೆ. ಇದನ್ನೂ ಓದಿ: ಜೆದ್ದಾ, ಮದೀನಾಗೆ ವಿಮಾನಯಾನ ಪುನಾರಂಭಿಸಿದ ಇಂಡಿಗೋ – ರಿಯಾದ್, ದಮ್ಮಾಮ್ಗೆ ವಿಮಾನ ಸೇವೆ ಡಿ.7ರ ವರೆಗೆ ಸ್ಥಗಿತ
DL1972 ವಿಮಾನ ಕಾನ್ಸಾಸ್ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (MCI) ಲಾಸ್ ಏಂಜಲೀಸ್ಗೆ ಬಂದಿತ್ತು. ಶನಿವಾರ ಬೆಳಿಗ್ಗೆ 8:08 ಕ್ಕೆ ಕಾನ್ಸಾಸ್ ನಗರದಿಂದ ಹೊರಟು ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಯಾಣಿಸಿತ್ತು. ಭೂಕಂಪ ಸಂಭವಿಸುವ ವೇಳೆ ವಿಮಾನ ಲಾಸ್ ಏಂಜಲೀಸ್ ಸಮೀಪಿಸಿತ್ತು. ಸೆರೆಯಾದ ವಿಡಿಯೋ ಒಂದರಲ್ಲಿ ಅಧಿಕಾರಿಗಳು ʻಭೂಕಂಪ ಸಂಭವಿಸುತ್ತಿದೆ, ನೀವು ಹೋಗಿʼ ಎಂದು ಪೈಲಟ್ಗೆ ಹೇಳುವ ಧ್ವನಿ ರೆಕಾರ್ಡ್ ಆಗಿದೆ.
ಭೂಕಂಪನದಿಂದ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆಗಿದ್ದ ಸೀಲಿಂಗ್ ಟೈಲ್ಸ್ಗಳು ನೆಲಕ್ಕೆ ಬಿದ್ದಿವೆ ಎಂದು ವರದಿಯಾಗಿದೆ. ಈ ಸಮಯದಲ್ಲಿ ಯಾವುದೇ ಪ್ರಮುಖ ಹಾನಿ ಅಥವಾ ಗಾಯಗಳಾದ ವರದಿಯಾಗಿಲ್ಲ. ಸುಮಾರು 30 ಸೆಕೆಂಡುಗಳ ಕಾಲ ಈ ಕಂಪನ ನಡೆದಿದೆ. ವಿಮಾನ ನಿಲ್ದಾಣ ಮತ್ತು ನಗರದಾದ್ಯಂತ ಪರಿಶೀಲನೆ ನಡೆಯುತ್ತಿವೆ. ಇದನ್ನೂ ಓದಿ: ಕೆಟ್ಟ ಹವಾಮಾನ – ಪುಣೆಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನ ಲಕ್ನೋನಲ್ಲಿ ತುರ್ತು ಭೂಸ್ಪರ್ಶ
