ಬಾಲಿವುಡ್ ಹಿರಿಯ ನಟ ಗೋವಿಂದ(Govinda) ಅವರ 40 ವರ್ಷಗಳ ದಾಂಪತ್ಯ ಜೀವನದಲ್ಲಿ ಎದ್ದಿದ್ದ ಬಿರುಗಾಳಿ ಇದೀಗ ತಣ್ಣಗಾಗುವ ಲಕ್ಷಣಗಳು ಕಾಣಿಸಿವೆ. ಪತಿ ಗೋವಿಂದ ಅವರಿಂದ ವಿಚ್ಛೇದನ(Divorce) ಕೋರಿ ಅರ್ಜಿ ಸಲ್ಲಿಸಿದ್ದ ಪತ್ನಿ ಸುನೀತಾ ಅಹುಜಾ(Sunita Ahuja) ಇದೀಗ ತಮ್ಮ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ.
ಬುಧವಾರ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ (Family Court) ಸುನೀತಾ ಅಹುಜಾ ದಿಢೀರ್ ಭೇಟಿ ನೀಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ವೇಳೆ ಪುತ್ರ ಯಶ್‌ವರ್ಧನ್ ಹಾಗೂ ವಕೀಲರು ಅವರ ಜೊತೆಗಿದ್ದರು.
ಕೋರ್ಟ್ ಕಲಾಪ ಮುಗಿಸಿ ಹೊರಬರುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಸುನೀತಾ ತೀವ್ರ ಸಿಟ್ಟಿನಲ್ಲಿದ್ದರು. “ನ್ಯಾಯಾಲಯಕ್ಕೆ ಯಾಕೆ ಬಂದಿದ್ದೀರಿ?” ಎಂದು ಪಾಪರಾಜಿಗಳು ಪ್ರಶ್ನಿಸಿದಾಗ, ಸಿಟ್ಟಿನಲ್ಲೇ “ಬರ್ತ್‌ಡೇ ಸೆಲೆಬ್ರೇಟ್ ಮಾಡಲು ಬಂದಿದ್ದೇನೆ” ಎಂದು ವ್ಯಂಗ್ಯವಾಗಿ ಉತ್ತರಿಸಿ ಕಾರು ಹತ್ತಿ ತೆರಳಿದರು.
ಸುನೀತಾ ಅವರ ದಿಢೀರ್ ಕೋರ್ಟ್ ಭೇಟಿಯ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಗೋವಿಂದ ಮ್ಯಾನೇಜರ್ ಶಶಿ ಸಿನ್ಹಾ, “ಸುನೀತಾ ಅವರು ಈ ಹಿಂದೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ” ಎಂದು ತಿಳಿಸಿದ್ದಾರೆ.
1988ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಗೋವಿಂದ–ಸುನೀತಾ ದಂಪತಿ ಮಧ್ಯೆ ಕಳೆದ ಕೆಲವು ಸಮಯದಿಂದ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸುನೀತಾ ಅವರು 2024ರ ಡಿಸೆಂಬರ್ 5ರಂದು ಬಾಂದ್ರಾ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
4 ದಶಕಗಳ ಸುದೀರ್ಘ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಈಗ ಅರ್ಜಿ ವಾಪಸ್ ಪಡೆಯುವ ಮೂಲಕ ದಂಪತಿ ನಡುವಿನ ವೈಮನಸ್ಸು ಶಮನಗೊಂಡಿದ್ದು, ಸಂಸಾರ ಮತ್ತೆ ಸರಿದಾರಿಗೆ ಬಂದಿರುವ ಸುಳಿವು ಸಿಕ್ಕಿದೆ. ಸದ್ಯಕ್ಕೆ ವಿಚ್ಛೇದನ ಅರ್ಜಿ ರದ್ದಾಗಿದ್ದು, ಈ ಮಹತ್ವದ ನಿರ್ಧಾರದ ಕುರಿತು ನಟ ಗೋವಿಂದ ಅಥವಾ ಸುನೀತಾ ಅಹುಜಾ ಅವರಿಂದ ಅಧಿಕೃತ ಹೇಳಿಕೆ ಹೊರಬರಬೇಕಿದೆ.

