– ಸರ್ಕಾರಿ ವಸ್ತುಸಂಗ್ರಹಾಲಯದ ನವೀಕರಣ 6 ತಿಂಗಳಲ್ಲಿ ಪೂರ್ಣ
ಬೆಂಗಳೂರು: ಹೃದಯಭಾಗದಲ್ಲಿರುವ ಬಾಲಭವನ, ಕೆಎಸ್‌ಟಿಡಿಸಿ(KSTDC) ಮಯೂರ ಹೋಟೆಲ್, ಬೆಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯ ಹಾಗೂ ವೆಂಕಟಪ್ಪ ಆರ್ಟ್ ಗ್ಯಾಲರಿ ಸೇರಿದಂತೆ ಪ್ರಮುಖ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಮಕ್ಕಳು, ಕುಟುಂಬಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ಕಲ್ಪಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಹಾಗೂ ಇಂಧನ ಸಚಿವರಾದ ಕೆ.ಜೆ. ಜಾರ್ಜ್(KJ George) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ಶಿವಪ್ರಸಾದ್ ಅವರೊಂದಿಗೆ ಸಚಿವರು ಬಾಲಭವನದಲ್ಲಿರುವ ಕೆಎಸ್‌ಟಿಡಿಸಿ ಮಯೂರ ಹೋಟೆಲ್‌ಗೆ ದಿಢೀರ್ ಭೇಟಿ ನೀಡಿ, ಹೋಟೆಲ್‌ನ ಸೌಲಭ್ಯಗಳು, ಸ್ವಚ್ಛತೆ, ಆಹಾರ ವ್ಯವಸ್ಥೆ ಹಾಗೂ ಒಟ್ಟಾರೆ ನಿರ್ವಹಣೆಯನ್ನು ಪರಿಶೀಲಿಸಿದರು.
ಕಬ್ಬನ್ ಪಾರ್ಕ್‌ನಲ್ಲಿರುವ(Cubbon Park) ಬಾಲಭವನವು ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಕರ್ಷಿಸುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ಆಗಮಿಸುವ ಮಕ್ಕಳಿಗೆ ಗುಣಮಟ್ಟದ ಆಹಾರ, ಉತ್ತಮ ಸೌಲಭ್ಯ ಹಾಗೂ ಕುಟುಂಬ ಸ್ನೇಹಿ ವಾತಾವರಣ ಕಲ್ಪಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.
ಈ ಹಿನ್ನೆಲೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಟಿಡಿಸಿ ಮಯೂರ ಹೋಟೆಲ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಅತ್ಯಾಧುನಿಕ ಮೂಲಸೌಕರ್ಯ, ಉತ್ತಮ ಗುಣಮಟ್ಟದ ಆಹಾರ ಹಾಗೂ ಸಾರ್ವಜನಿಕರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಯೂರ ಹೋಟೆಲ್ ಅನ್ನು ಮಕ್ಕಳ ಅಗತ್ಯತೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ, ಕೆಎಸ್‌ಟಿಡಿಸಿಯ ಇತರೆ ಹೋಟೆಲ್‌ಗಳಿಗೂ ಮಾದರಿಯಾಗುವ ರೀತಿಯಲ್ಲಿ ರೂಪಿಸುವಂತೆ ಸಚಿವರು ಸೂಚಿಸಿದರು. ಹೋಟೆಲ್‌ನ ಆಹಾರ ಪಟ್ಟಿಯಲ್ಲಿ ಮಕ್ಕಳಿಗೆ ಇಷ್ಟವಾಗುವ ಹಾಗೂ ಸೂಕ್ತವಾದ ತಿಂಡಿಗಳು ಮತ್ತು ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದರು.
ರೆಸ್ಟೋರೆಂಟ್ ವ್ಯವಸ್ಥೆಯ ಮೇಲ್ದರ್ಜೆಗೇರಿಕೆಗೆ ಸಂಬಂಧಿಸಿದಂತೆ ಲೀಸ್ ವಿಸ್ತರಣೆ ಕುರಿತು ಬಾಲಭವನ ಅಧ್ಯಕ್ಷರೊಂದಿಗೆ ಸಚಿವರು ಮಾತುಕತೆ ನಡೆಸಿದರು.

ಮಕ್ಕಳೊಂದಿಗೆ ಬೆರೆತ ಸಚಿವರು
ಹೋಟೆಲ್ ಪರಿಶೀಲನೆಯ ಸಂದರ್ಭದಲ್ಲಿ ಬಾಲಭವನಕ್ಕೆ ಆಗಮಿಸಿದ್ದ ಮಕ್ಕಳೊಂದಿಗೆ ಸಚಿವ ಕೆ.ಜೆ. ಜಾರ್ಜ್ ಅವರು ಆತ್ಮೀಯವಾಗಿ ಸಂವಾದ ನಡೆಸಿದರು. ಮಕ್ಕಳ ಅಭಿರುಚಿ ಹಾಗೂ ಅವರಿಗೆ ಇಷ್ಟವಾಗುವ ವಿಷಯಗಳ ಕುರಿತು ವಿಚಾರಿಸಿದ ಸಚಿವರು, ಬಳಿಕ ಮಕ್ಕಳಿಗೆ ಐಸ್‌ಕ್ರೀಂ ನೀಡಿ ಅವರೊಂದಿಗೆ ಸಂಭ್ರಮಿಸಿದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಬಾಲಭವನದ ಮಯೂರ ಹೋಟೆಲ್‌ನಲ್ಲಿ ಮಕ್ಕಳಿಗೆ ಇಷ್ಟವಾಗುವ ಆಹಾರ ಪದಾರ್ಥಗಳು ಮತ್ತು ತಿಂಡಿಗಳಿಗೆ ಆದ್ಯತೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ
ವಸ್ತುಸಂಗ್ರಹಾಲಯಕ್ಕೆ ಕಾಯಕಲ್ಪ
ಬಾಲಭವನದ ಬಳಿಕ ಸಚಿವರು ನಗರದ ಐತಿಹಾಸಿಕ ಬೆಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿ ನವೀಕರಣ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
1865ರಲ್ಲಿ ಸ್ಥಾಪನೆಯಾದ ಈ ವಸ್ತುಸಂಗ್ರಹಾಲಯವು ದಕ್ಷಿಣ ಭಾರತದ ಎರಡನೇ ಅತ್ಯಂತ ಹಳೆಯ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಕರ್ನಾಟಕದ ಇತಿಹಾಸ, ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ಸಂಸ್ಥೆಯಾಗಿದೆ.
ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಮುಖ ಕೇಂದ್ರವಾಗಿರುವ ವಸ್ತುಸಂಗ್ರಹಾಲಯವನ್ನು ಆಧುನಿಕ ಸೌಲಭ್ಯಗಳೊಂದಿಗೆ ಮತ್ತಷ್ಟು ಆಕರ್ಷಕ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನವೀಕರಣ ಕಾಮಗಾರಿಗಳಿಗೆ ವೇಗ ನೀಡುವಂತೆ ಸಚಿವರು ಸೂಚಿಸಿದರು.
ವಸ್ತುಸಂಗ್ರಹಾಲಯದ ನವೀಕರಣ ಕಾಮಗಾರಿಗಳನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಪುನಃ ಮುಕ್ತಗೊಳಿಸುವಂತೆ ಸಚಿವರು ಕಾಲಮಿತಿ ನಿಗದಿಪಡಿಸಿದರು.
ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಚಟುವಟಿಕೆಗಳಿಗೆ ಒತ್ತು
ಸಚಿವರು ವೆಂಕಟಪ್ಪ ಆರ್ಟ್ ಗ್ಯಾಲರಿಗೂ ಭೇಟಿ ನೀಡಿ ಅಲ್ಲಿನ ಕಲಾಕೃತಿಗಳನ್ನು ವೀಕ್ಷಿಸಿದರು. ಗ್ಯಾಲರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಕಲಾ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರೆ ಚಟುವಟಿಕೆಗಳನ್ನು ಆಯೋಜಿಸುವ ಕುರಿತು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ಯಾಲರಿಯಲ್ಲಿರುವ ಅಮೂಲ್ಯ ಕಲಾಕೃತಿಗಳ ಸಂರಕ್ಷಣೆಗೆ ಅಗತ್ಯವಿರುವ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು.

