ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ(Renukaswamy Murder Case) ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೋಷ್(Pradosh) ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯುವಂತೆ ಕೋರಿ ನಟ ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.
ಇಂದು ನಡೆದ ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಪ್ರದೋಷ್ ಪರ ವಕೀಲರು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ (SPP) ನಡುವೆ ತೀವ್ರ ವಾದ-ಪ್ರತಿವಾದ ನಡೆಯಿತು.
ದರ್ಶನ್ ಪರ ವಕೀಲ ಹಶ್ಮತ್ ಪಾಷಾ ವಾದ ಏನು?
ಪ್ರದೋಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದು, ಬೇರೊಬ್ಬರ ನಂಬರ್ ಹೆಸರಿನಲ್ಲಿ ಎಂಟ್ರಿ ಮಾಡಿಸಿ ತನ್ನ ಪತ್ನಿಗೆ ಕರೆ ಮಾಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿ ತನಿಖೆ ನಡೆಯುತ್ತಿದೆ.
ಜೈಲಾಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲೂ ಅಕ್ರಮ ಕರೆ ಮಾಡಿರುವುದು ದೃಢಪಟ್ಟಿದೆ. ಜೈಲಿನಿಂದ ಹೊರಬರಲು ಪ್ರದೋಷ್ ಹಲವರ ಜೊತೆ ಸಂಪರ್ಕ ಸಾಧಿಸಿದ್ದು, ಆತನ ಮೇಲೆ ಯಾರೋ ಒತ್ತಡ ಹೇರಿರುವ ಸಾಧ್ಯತೆಯಿದೆ.
ಈ ಅಕ್ರಮದ ಸಂಪೂರ್ಣ ತನಿಖೆ ಮುಕ್ತಾಯವಾಗುವವರೆಗೂ ಪ್ರದೋಷ್‌ನನ್ನು ಮಾಫಿ(Approver) ಸಾಕ್ಷಿ ಎಂದು ಪರಿಗಣಿಸಬಾರದು. ಹೈಕೋರ್ಟ್ ಆದೇಶಕ್ಕೆ ಕಾಲಾವಕಾಶ ಕೋರಿ, ತನಿಖೆ ಪೂರ್ಣಗೊಂಡ ನಂತರವೇ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಪ್ರದೋಷ್ ಪರ ವಕೀಲ ದಿವಾಕರ್ ವಾದ ಏನು?
ಜೈಲಿನಲ್ಲಿ ನಡೆದಿದೆ ಎನ್ನಲಾದ ಘಟನೆ ಸಂಪೂರ್ಣ ಪ್ರತ್ಯೇಕ ಪ್ರಕರಣ. ಜೈಲು ಮ್ಯಾನುಯಲ್ ಪ್ರಕಾರ ಖೈದಿಗಳಿಗೆ 3 ಫೋನ್ ನಂಬರ್‌ಗಳಿಗೆ ಕರೆ ಮಾಡಲು ಅವಕಾಶವಿದೆ. ಹೈಕೋರ್ಟ್ ಈಗಾಗಲೇ ಒಂದು ವಾರದೊಳಗೆ ಆದೇಶ ನೀಡುವಂತೆ ನಿರ್ದೇಶಿಸಿದೆ. ಈ ಸಂದರ್ಭದಲ್ಲಿ ದರ್ಶನ್ ಪರ ಸಲ್ಲಿಸಿರುವ ಮೆಮೋಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಹೀಗಾಗಿ ಕಾಲಹರಣ ಮಾಡದೆ ಇಂದೇ ಆದೇಶ ಪ್ರಕಟಿಸಬೇಕು ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಬೆಳಗಾವಿ ಗ್ರಾಮ ಪಂಚಾಯಿತಿಯಲ್ಲಿ ತಂದೆ, ಮಗಳ ಬರ್ಬರ ಹತ್ಯೆ
ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಏನು?
ದರ್ಶನ್ ಪರ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲು ಅರ್ಹವಲ್ಲ ಮತ್ತು ಇದು ಅಪ್ರಸ್ತುತ. ತನ್ನ ಮಿತಿ ಮೀರಿ ಪತ್ನಿಯ ನಂಬರ್ ಅನ್ನು ಸಂತೋಷ್ ಎಂಬ ವಕೀಲರ ಹೆಸರಿನಲ್ಲಿ ನೋಂದಾಯಿಸಿ ಮಾತನಾಡಿದ್ದಾನೆ ಎನ್ನಲಾದ ಆರೋಪ ಇದಾಗಿದೆ. ಒಂದು ರಾಗಿಮುದ್ದೆ ನೀಡಿದರೆ ಎರಡನ್ನು ತಿಂದಿದ್ದಾನೆ ಎನ್ನುವ ರೀತಿಯ ಪ್ರಕರಣವಿದು.
ಪ್ರದೋಷ್ ಮೇಲಿನ ಈ ಆರೋಪಕ್ಕೂ ಆತ ಮಾಫಿ ಸಾಕ್ಷಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ವಿನಯ್ ಕುಲಕರ್ಣಿ ಪ್ರಕರಣದಲ್ಲೂ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ ಮೇಲೆ ಹಳೆ ಕೇಸ್‌ಗಳಿದ್ದರೂ ಪರಿಗಣಿಸಲಾಗಿತ್ತು. ಹೈಕೋರ್ಟ್ ಆದೇಶದಂತೆ ನ್ಯಾಯಾಲಯ ಮುಂದುವರಿಯಬೇಕು ಎಂದು ವಾದಿಸಿದರು.
ಜಡ್ಜ್ ಮುಂದೆ ಪ್ರದೋಷ್ ಅಳಲು:
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಪ್ರದೋಷ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾನೆ. “ಮಹಾಸ್ವಾಮಿ, ಜೈಲು ಅಧಿಕಾರಿಗಳೇ ನನಗೆ ಐಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು. ನನಗೆ ಯಾವುದೇ ಸಿಸ್ಟಮ್ ಆಕ್ಸೆಸ್ ಇಲ್ಲ. ಮೊದಲು ಲೀಗಲ್ ಎಂದಿದ್ದ ಅಧಿಕಾರಿಗಳೇ ಈಗ ಇಲ್ಲೀಗಲ್ ಎನ್ನುತ್ತಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ನನ್ನನ್ನು ಗುರಿಯಾಗಿಸಿ ಕ್ಯಾಂಟೀನ್ ವ್ಯವಸ್ಥೆ ಕಿತ್ತುಕೊಂಡು, ಒಂದು ತಿಂಗಳು ಸೆಲ್‌ನಲ್ಲಿರಬೇಕು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡುವಂತಿಲ್ಲ ಎಂದು ಬೆದರಿಸುತ್ತಿದ್ದಾರೆ” ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.

