ಬಾಗಲಕೋಟೆ: ಸರ್ಕಾರಿ ‘ನಮ್ಮ ಕ್ಲಿನಿಕ್’ ವೈದ್ಯಾಧಿಕಾರಿಯಾಗಿ ವೇತನ ಪಡೆಯುತ್ತಲೇ ಏಕಕಾಲದಲ್ಲಿ ಮೆಡಿಕಲ್ ಪಿಜಿ ವ್ಯಾಸಂಗ ಮಾಡುತ್ತಿರುವ ಗಂಭೀರ ಕರ್ತವ್ಯ ಲೋಪ ಪ್ರಕರಣದಲ್ಲಿ ವಿಚಾರಣೆಗೆ ವೈದ್ಯೆ ಡಾ. ಅಂಕಿತಾ ಯರಗಲ್(Ankita Yaragal) ಗೈರಾಗಿದ್ದಾರೆ.
ಹಾಲಿ ಡಿಹೆಚ್‌ಒ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಹಾಲಿ ಶಾಸಕ ಉಮೇಶ್ ಮೇಟಿ(Umesh Meti) ಅವರ ಸೊಸೆ ಡಾ. ಅಂಕಿತಾ ಯರಗಲ್ ಅವರಿಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒ ಗಜಾನನ ಬಾಲೆ ಖಡಕ್ ಎಚ್ಚರಿಕೆ ನೋಟಿಸ್ ಜಾರಿ ಮಾಡಿದ್ದಾರೆ.
ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಅಂಕಿತಾ ಮಾರ್ಚ್ 3 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಎಸ್.ಎನ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದರೂ, ನಿನ್ನೆ ನಿಗದಿಯಾಗಿದ್ದ ಸಿಇಒ ಅವರ ವಿಚಾರಣೆಗೆ ಡಾ. ಅಂಕಿತಾ ಹಾಜರಾಗದೆ ಗೈರಾಗಿದ್ದರು. ಇದನ್ನೂ ಓದಿ: 75 ಸಾವಿರ ಸಂಬಳ ಪಡೆದು ನಮ್ಮ ಕ್ಲಿನಿಕ್‌ಗೆ ಗೈರು – ಶಾಸಕ ಉಮೇಶ್ ಮೇಟಿ ಸೊಸೆ ಗುತ್ತಿಗೆ ಸೇವೆಯಿಂದ ಬಿಡುಗಡೆ
ನೋಟಿಸ್‌ನಲ್ಲಿ ಏನಿದೆ?
ಕರ್ತವ್ಯ ಲೋಪ ಹಾಗೂ ವೃತ್ತಿಪರ ದುರ್ನಡತೆಯ ಹಿನ್ನೆಲೆಯಲ್ಲಿ ವೈದ್ಯೆಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕರ್ನಾಟಕ ವೈದ್ಯಕೀಯ ಮಂಡಳಿ (KMC) ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಶಿಫಾರಸು ಮಾಡಲಾಗುವುದು.
ಈ ಕೃತ್ಯವು ಕರ್ನಾಟಕ ವೈದ್ಯಕೀಯ ನೋಂದಣಿ ಕಾಯ್ದೆ 1961 ಹಾಗೂ ಎನ್‌ಎಂಸಿ ವೃತ್ತಿಪರ ನೈತಿಕ ಸಂಹಿತೆಯ ನೇರ ಉಲ್ಲಂಘನೆಯಾಗಿದೆ. ಅನಧಿಕೃತವಾಗಿ ಎರಡು ಕಡೆ ತೊಡಗಿಸಿಕೊಂಡಿದ್ದ ಅವಧಿಯಲ್ಲಿ ಪಡೆದ ಸಂಪೂರ್ಣ ವೇತನ ಮತ್ತು ಗೌರವಧನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು.
ಮುಂದಿನ ವಿಚಾರಣೆಯನ್ನು ಸೆ.18 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಕೊಠಡಿ ಸಂಖ್ಯೆ 11 ರಲ್ಲಿ ನಿಗದಿಪಡಿಸಲಾಗಿದೆ. ಅಂದು ಅಗತ್ಯ ದಾಖಲೆಗಳೊಂದಿಗೆ ಖುದ್ದು ಹಾಜರಾಗದಿದ್ದರೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಇಒ ಎಚ್ಚರಿಸಿದ್ದಾರೆ.

