ಕೊಪ್ಪಳ/ಬಳ್ಳಾರಿ: ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಗುರುವಾರ ಮಹತ್ವದ ದಿನವಾಗಿ ದಾಖಲಾಗಿದೆ. 73 ವರ್ಷಗಳ ಬಳಿಕ ಡ್ಯಾಂನ ಹಳೆಯ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಿ, ನೂತನ 33 ಗೇಟ್‌ಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D. K. Shivakumar), ಆಂಧ್ರಪ್ರದೇಶ ಮುಖ್ಯಮಂತ್ರಿ ಏನ್ ಚಂದ್ರಬಾಬು ನಾಯ್ಡು (N. Chandrababu Naidu), ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (A. Revanth Reddy) ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ. ಆರ್ ಪಾಟೀಲ್) C. R. Patil ಭಾಗವಹಿಸಿದರು.
ಮೂವರು ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಒಂದೇ ವಾಹನದಲ್ಲಿ ಜಲಾಶಯದ ಗೇಟ್‌ಗಳ ಬಳಿ ತೆರಳಿದರು. ಬಳಿಕ 18, 19, 20 ಮತ್ತು 21ನೇ ಕ್ರೆಸ್ಟ್ ಗೇಟ್‌ಗಳಿಗೆ ವಿಶೇಷ ಪೂಜೆ ಸಲ್ಲಿಸಿ, ರಿಮೋಟ್ ಮೂಲಕ ಲೋಕಾರ್ಪಣೆ ಮಾಡಿದರು. ನಾಲ್ವರು ನಾಯಕರು ತಲಾ ಒಂದೊಂದು ಗೇಟ್ ಉದ್ಘಾಟಿಸಿದರು.
2024ರಲ್ಲಿ ಕೊಚ್ಚಿ ಹೋಗಿದ್ದ 19ನೇ ಗೇಟ್
2024ರ ಆಗಸ್ಟ್‌ನಲ್ಲಿ ತುಂಗಭದ್ರಾ ಡ್ಯಾಂನ 19ನೇ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿದ್ದ ಘಟನೆ ದೇಶದ ಗಮನ ಸೆಳೆದಿತ್ತು. ಬಳಿಕ ಡ್ಯಾಂ ಸುರಕ್ಷತಾ ತಂಡ ಮತ್ತು ಕೇಂದ್ರ ಜಲಶಕ್ತಿ ಆಯೋಗದ ಪರಿಶೀಲನೆ ನಡೆಸಿ, ಒಟ್ಟು 33 ಗೇಟ್‌ಗಳನ್ನು ಬದಲಾಯಿಸಲು ಸೂಚಿಸಿತ್ತು. ಅದರಂತೆ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ಹೊಸ ಗೇಟ್‌ಗಳನ್ನು ಅಳವಡಿಸಲಾಗಿದೆ. 1953ರಲ್ಲಿ ಅಳವಡಿಸಲಾಗಿದ್ದ ಹಳೆಯ ಗೇಟ್‌ಗಳು ಸವಕಳಿಯಾಗಿದ್ದವು. ಪ್ರತಿಯೊಂದು ಗೇಟ್ 20 ಅಡಿ ಎತ್ತರ, 60 ಅಡಿ ಅಗಲ ಹಾಗೂ 48.50 ಟನ್ ತೂಕ ಹೊಂದಿದೆ.
#WATCH | Hosapete, Karnataka | Union Jal Shakti Minister C.R. Patil, Karnataka Chief Minister D.K. Shivakumar, Andhra Pradesh CM N. Chandrababu Naidu and Telangana CM A. Revanth Reddy jointly inaugurate 33 newly installed spillway gates of the Tungabhadra Dam today pic.twitter.com/AWHCFPX7Ea
— ANI (@ANI) June 25, 2026
ಐತಿಹಾಸಿಕ ವೇದಿಕೆಯಲ್ಲಿ ನೀರಾವರಿ ಚರ್ಚೆ ಸಾಧ್ಯತೆ
ಕಾರ್ಯಕ್ರಮದ ವೇಳೆ ನವಲಿ ಸಮಾನಾಂತರ ಜಲಾಶಯ, ತುಂಗಭದ್ರಾದಲ್ಲಿ ಹೆಚ್ಚುತ್ತಿರುವ ಹೂಳು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಕುರಿತು ಅನೌಪಚಾರಿಕ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ನವಲಿ ಜಲಾಶಯ ಹಾಗೂ ಪ್ರವಾಹ ಹರಿವು ಕಾಲುವೆ ಯೋಜನೆ ಕುರಿತು ಕರ್ನಾಟಕ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಮಾತುಕತೆಗೆ ಮನವಿ ಮಾಡಿತ್ತು.ಇದನ್ನೂ ಓದಿ: ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ ಸೇರ್ಪಡೆ

ಸಾವಿರಾರು ರೈತರ ಸಮಾಗಮ
ಮುನಿರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಾವಿರಾರು ರೈತರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾ ದೃಷ್ಟಿಯಿಂದ ಆರು ಎಸ್‌ಪಿ, 25 ಡಿವೈಎಸ್‌ಪಿ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಭಾಗಿ
ತುಂಗಭದ್ರಾ ಡ್ಯಾಂನ ಗೇಟ್ ನಿರ್ಮಾಣ ಹಾಗೂ ತಾಂತ್ರಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೇಟ್ ಪೂಜೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: NCERT ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ
