ಬೆಂಗಳೂರು: ಆಗಸ್ಟ್ 13 ರ ಗುರುವಾರದಂದು ಅಖಂಡ ಕರ್ನಾಟಕ ಬಂದ್ ನಡೆಯಲಿದೆ ಎಂಬ ವಿಚಾರವಾಗಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಬಿದ್ದಿದೆ. ರಾಜ್ಯದಲ್ಲಿ ಗುರುವಾರ ಅಖಂಡ ಕರ್ನಾಟಕ (ಸಂಪೂರ್ಣ ಕರ್ನಾಟಕ) ಬಂದ್ ಇರುವುದಿಲ್ಲ ಎಂದು ತಿಳಿದುಬಂದಿದೆ.
ಕೆಲವು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ, ಹಲವು ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ. ಹೀಗಾಗಿ ಜನರು ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ ಎಂದು ಬೆಂಗಳೂರು ನರಗ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಗುರುವಾರ ಕರ್ನಾಟಕ ಬಂದ್ ಅಂತಾ ಇತ್ತು. ನಾವು ಎಲ್ಲರನ್ನ ಮನವಿ ಮಾಡಿದ್ದೇವೆ. ಕೆಲವು ಸಂಘಟನೆಗಳು ಮಾಡಲ್ಲ ಅಂತಾ ಹೇಳಿವೆ. ಇನ್ನೂ ಕೆಲವು ಸಂಘಟನೆಗಳು ಬಂದ್ ಮಾಡ್ತಿವಿ ಅಂತಾ ಹೇಳಿದ್ದಾರೆ. ನಾವೇನು ಪೊಲೀಸ್ ಬಂದೋಬಸ್ತ್ ಮಾಡಬೇಕೋ ಮಾಡ್ತೇವೆ. ಜನರು ಭಯಪಡುವ ಅವಶ್ಯಕತೆ ಇಲ್ಲ, ಜನರಿಗಾಗಿಯೇ ನಾವು ಇರೋದು ಎಂದು ಹೇಳಿದ್ದಾರೆ.

ಬಂದ್‌ಗೆ ಕನ್ನಡಪರ ಸಂಘಟನೆಗಳ ಬೆಂಬಲ ಇಲ್ಲ
ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಬಣವೂ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ. ಹೋರಾಟ ಮಾಡಬೇಕೇ ಹೊರತು ಬಂದ್ ಮಾಡುವುದು ಬೇಡ ಎಂಬ ನಿಲುವನ್ನ ಸಂಘಟನೆ ವ್ಯಕ್ತಪಡಿಸಿದೆ. ಇದೇ ವೇಳೆ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಕೂಡ ನಾಳಿನ ಬಂದ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಂದ್‌ಗೆ ವಾಟಾಳ್ ನಾಗರಾಜ್ ಕರೆ
ಮತ್ತೊಂದೆಡೆ, ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರವನ್ನು ವಿರೋಧಿಸಿ ವಾಟಾಳ್ ನಾಗರಾಜ್ ನಾಳೆ (ಆ.13) ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. “ಬಂದ್ ಮಾಡೇ ಮಾಡುತ್ತೇವೆ” ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಅತ್ತಿಬೆಲೆ ಗಡಿಯಲ್ಲಿ ರಸ್ತೆ ತಡೆ
ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ರಸ್ತೆ ತಡೆ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಮೇಕೆದಾಟು ಯೋಜನೆಗೆ ಅಡ್ಡಿಪಡಿಸದಂತೆ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

