– ಗುಂಡಿನ ದಾಳಿಗೆ ಆದೇಶ ನೀಡಿದ್ದರೆ ಹೊಣೆಗಾರರು, ಗೊತ್ತೇ ಇಲ್ಲದಿದ್ರೆ ಅಸಮರ್ಥರು ಎಂದ ರಾಗಾ
ನವದೆಹಲಿ: ʻಬಲೂನ್ ಒಡೆದುಹೋಗಿದೆ. ಈಗ ಕೊನೆಯ ಕ್ಷಣದಲ್ಲಿ ಮತ್ತೆ ಗಾಳಿ ತುಂಬಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಆದೇಶ ನೀಡಿದ್ದು ಯಾರು? ಅಮಿತ್ ಶಾ (Amit Shah) ಆದೇಶ ನೀಡಿದ್ದರೆ ಅವರು ರಾಜೀನಾಮೆ ಕೊಡಬೇಕು, ಏಕೆಂದ್ರೆ ಅವರೇ ಹೊಣೆಗಾರರು. ಈ ವಿಷಯ ಗಮನಕ್ಕೆ ಬಂದಿಲ್ಲ ಎಂದರೂ ರಾಜೀನಾಮೆ ನೀಡಬೇಕು. ಏಕೆಂದ್ರೆ ಅವರು ಅಸಮರ್ಥರು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಲೇವಡಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಪ್ರತಿಪಕ್ಷಗಳು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ ಬೆನ್ನಲ್ಲೇ, ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಕಳೆದ 20 ದಿನಗಳಿಂದ ಅಮಿತ್ ಶಾ ಸಂಸತ್ತಿನಲ್ಲಿ ಕಾಣಿಸಿಕೊಂಡಿಲ್ಲ ಎಂದು ಆರೋಪಿಸಿದ ಅವರು, ಇದೀಗ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಕೊನೆಯ ಕ್ಷಣದಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
When a man lacks the courage to speak the truth, his silence speaks for him.
Amit Shah’s silence is his confession. pic.twitter.com/allKZBCadh
— Rahul Gandhi (@RahulGandhi) August 12, 2026
ʻಬಲೂನ್ ಒಡೆದುಹೋಗಿದೆ. ಈಗ ಕೊನೆಯ ಕ್ಷಣದಲ್ಲಿ ಮತ್ತೆ ಗಾಳಿ ತುಂಬಲು ಪ್ರಯತ್ನಿಸುತ್ತಿದ್ದಾರೆ. ಅಮಿತ್ ಶಾಗೆ ಧೈರ್ಯವಿಲ್ಲ, ಗೃಹ ಸಚಿವರಿಗೆ ಧೈರ್ಯವಿಲ್ಲʼ ಎಂದು ಲೇವಡಿ ಮಾಡಿದರು.
ಜುಲೈ 20ರಂದು NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ಮೆರವಣಿಗೆ ವೇಳೆ ಪೊಲೀಸರು ನಡೆಸಿದರೆನ್ನಲಾದ ಕ್ರಮಗಳ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್, ಸಚಿವರ ಕಲ್ಪನೆಗಳು, ಉಪನ್ಯಾಸಗಳು ಅಥವಾ ಚರ್ಚೆ ಕೇಳಲು ಪ್ರತಿಪಕ್ಷಗಳಿಗೆ ಆಸಕ್ತಿಯಿಲ್ಲ. ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ನಡೆಸಲು ಆದೇಶ ನೀಡಿದ್ದು ಯಾರು? ಎಂಬ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಶ್ನೆಗಳ ಸುರಿಮಳೆ
* ನಮಗೆ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು, ಅವರನ್ನು ಗಾಯಗೊಳಿಸಲು ಹಾಗೂ ಲಾಠಿಚಾರ್ಜ್ ಮಾಡಲು ಆದೇಶ ನೀಡಿದ್ದು ಯಾರು?
* ಒಬ್ಬ ವಿದ್ಯಾರ್ಥಿಯ ಕಣ್ಣಿಗೆ ಗಾಯವಾಗುವಂತೆ, ಮತ್ತೊಬ್ಬ ವಿದ್ಯಾರ್ಥಿಯ ಕಿವಿಗೆ ಗುಂಡು ತಗುಲುವಂತೆ ಮಾಡಿದವರು ಯಾರು?
* ಮೊಳೆಗಳನ್ನ ಅಳವಡಿಸಿರುವ ಲಾಠಿಗಳಿಂದ ವಿದ್ಯಾರ್ಥಿಗಳನ್ನ ಹೊಡೆಯಲು ಆದೇಶ ನೀಡಿದ್ದು ಯಾರು?
ಈ ಆದೇಶಗಳನ್ನ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಜಾರಿಗೊಳಿಸಲಾಗಿದೆ. ನಮ್ಮ ಮಕ್ಕಳ ಮೇಲೆ ಗುಂಡು ಹಾರಿಸಲು ಅಮಿತ್ ಶಾ ಆದೇಶ ನೀಡಿದ್ದರೇ? ನೀಡಿದ್ದರೆ ಅವರು ರಾಜೀನಾಮೆ ನೀಡಬೇಕು. ಏಕೆಂದರೆ ಅವರು ಹೊಣೆಗಾರರು. ಆದೇಶ ನೀಡಿಲ್ಲ ಎಂದಾದರೂ ಅವರು ರಾಜೀನಾಮೆ ನೀಡಬೇಕು, ಏಕೆಂದರೆ ಅವರು ಅಸಮರ್ಥರು ಎಂದು ಲೇವಡಿ ಮಾಡಿದರು.


