ಮಂಡ್ಯ: ʻಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲʼ ಎಂದು ಭರವಸೆ ನೀಡುತ್ತಿದ್ದ ರಾಜ್ಯ ಸರ್ಕಾರದ ಮಾತುಗಳು ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿವೆಯೇ ಎಂಬ ಅನುಮಾನ ಮೂಡಿದೆ. ರಾಜ್ಯದಲ್ಲಿ ನೀರಿನ ಅಭಾವ ಎದುರಾಗುತ್ತಿದ್ದರೂ, ಕೆಆರ್‌ಎಸ್ ಜಲಾಶಯದಿಂದ (KRS Dam) ನೆರೆ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ.
ಕೆಆರ್‌ಎಸ್ ಡ್ಯಾಂನ ಒಳಹರಿವು 3,864 ಕ್ಯೂಸೆಕ್‌ಗೆ ಕುಸಿತ ಕಂಡಿದ್ದು, ಈ ನಡುವೆ ಬರೋಬ್ಬರಿ 8,544 ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ. ಹೊರಬಿಡುತ್ತಿರುವ ನೀರಿನಲ್ಲಿ ಸುಮಾರು 5,500 ಕ್ಯೂಸೆಕ್ ನೀರು ನೇರವಾಗಿ ತಮಿಳುನಾಡಿಗೆ (Tamil Nadu) ಸೇರುತ್ತಿದೆ.

124.80 ಅಡಿಯ ಗರಿಷ್ಠ ಮಟ್ಟದ ಕೆಆರ್‌ಎಸ್‌ನಲ್ಲಿ 109.32 ಅಡಿ ನೀರಿದೆ. ಟಿಎಂಸಿ ಲೆಕ್ಕಚಾರದಲ್ಲಿ ನೋಡುವುದಾದರೆ 31.044 ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದೆ. ಒಂದೆಡೆ ಮಳೆಯ ಕೊರತೆಯಿಂದಾಗಿ ಡ್ಯಾಂಗೆ ಬರುವ ಒಳಹರಿವು ತೀವ್ರವಾಗಿ ಕುಸಿದಿದೆ. ಆದರೂ ಒಳಹರಿವಿಗಿಂತ ದುಪ್ಪಟ್ಟು ನೀರನ್ನು ಹೊರಬಿಡಲಾಗುತ್ತಿರುವುದು ರೈತರ ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ನಾವು ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದು ಸರ್ಕಾರ ಪ್ರತಿಪಾದಿಸುತ್ತಿದ್ದರೂ, ವಾಸ್ತವದಲ್ಲಿ ನದಿಯ ಮೂಲಕ ಸಾವಿರಾರು ಕ್ಯೂಸೆಕ್ ನೀರು ತಮಿಳುನಾಡು ಪಾಲಾಗುತ್ತಿದೆ. ಇದೇ ರೀತಿ ನಿರಂತರವಾಗಿ ಹೊರಹರಿವು ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿಗೂ ಗಂಭೀರ ಸಂಕಷ್ಟ ಎದುರಾಗುವ ಭೀತಿ ಎದುರಾಗಿದೆ.
