ಆಧುನಿಕ ಯುಗದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಲವು ಪುರಾತನ ಸ್ಮಾರಕಗಳು ನಾಶವಾಗುತ್ತಿವೆ. ಇತಿಹಾಸದ ಕುರುಹುಗಳನ್ನು ಅಳಿಸಿ, ಅವುಗಳಲ್ಲಿರುವ ಸಂಪತ್ತನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಶತಮಾನಗಳ ಇತಿಹಾಸವನ್ನು ತನ್ನೊಳಗೆ ಕಾಪಾಡಿಕೊಂಡು ಇಂದಿಗೂ ಜೀವಂತವಾಗಿರುವ ದೇಗುಲವೊಂದು ಉಳಿದಿರುವುದು ನಿಜಕ್ಕೂ ಸೋಜಿಗವೇ ಸರಿ.
ಮೈಸೂರಿನಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ತನ್ನ ಐತಿಹಾಸಿಕ ಮಹತ್ವದ ಕಾರಣಕ್ಕೆ ರಾಷ್ಟ್ರೀಯ ಸಂರಕ್ಷಿತ ಸ್ಮಾರಕ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಹಸಿರಿನ ನಡುವೆ ಇತಿಹಾಸದ ಜೀವಂತ ಕುರುಹು!
ಸುತ್ತಲೂ ಹಸಿರು ಹಾಸಿಗೆಯಂತೆ ಹರಡಿಕೊಂಡಿರುವ ಪ್ರಕೃತಿಯ ಮಡಿಲಿನಲ್ಲಿ ನಿಂತಿರುವ ಈ ದೇಗುಲ, ಗತಕಾಲದ ಇತಿಹಾಸವನ್ನ ಇಂದಿಗೂ ಜೀವಂತವಾಗಿರಿಸಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರನ್ನ ಪಕ್ಷಿಗಳ ಕಲರವ ಸ್ವಾಗತಿಸುತ್ತದೆ. ಸುತ್ತಮುತ್ತಲಿನ ಮರಗಳಲ್ಲಿ ಕಾಣಿಸಿಕೊಳ್ಳುವ ಮಂಗಗಳ ಚಿಲಿಪಿಲಿ, ಪ್ರವಾಸಿಗರ ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ.

ಇಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಪುರಾತನ ದೇವಾಲಯದ ವಾತಾವರಣ ಒಂದಕ್ಕೊಂದು ಬೆರೆತು, ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ.
ಚೋಳರಿಂದ ಹೊಯ್ಸಳರು, ವಿಜಯನಗರದವರೆಗೆ…
ಮಾರೇಹಳ್ಳಿ ರಾಜರಾಜಚೋಳನ ಕಾಲದಲ್ಲಿ ಪ್ರಸಿದ್ಧ ಅಗ್ರಹಾರವಾಗಿತ್ತು ಎನ್ನಲಾಗುತ್ತದೆ. ನಂತರದ ಅವಧಿಯಲ್ಲಿ ಹೊಯ್ಸಳರು ಹಾಗೂ ವಿಜಯನಗರದ ಅರಸರ ಕಾಲದಲ್ಲಿಯೂ ಈ ಪ್ರದೇಶ ಮಹತ್ವ ಪಡೆದಿತ್ತು. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಕಾಲಘಟ್ಟಗಳೊಂದಿಗೂ ಈ ಪ್ರದೇಶದ ಇತಿಹಾಸ ಬೆಸೆದುಕೊಂಡಿದೆ. ದೇವಾಲಯದ ಮುಂಭಾಗದಲ್ಲಿ ಸಣ್ಣದಾಗಿ ಹರಿಯುವ ಕಾಲುವೆ, ಇಲ್ಲಿಗೆ ಬರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. ಪ್ರಕೃತಿಯ ನಡುವೆ ಸಾಗುವ ಈ ನೀರಿನ ಹರಿವು ದೇಗುಲದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶಿಷ್ಟ ವಾಸ್ತುಶಿಲ್ಪದ ದೇವಾಲಯ
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ಸಂಪೂರ್ಣ ದೇವಾಲಯದ ವಿನ್ಯಾಸವನ್ನ ಹೊಂದಿರುವ ವಿಶಿಷ್ಟ ಪುರಾತನ ದೇಗುಲವಾಗಿದೆ. ಇಲ್ಲಿ ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ, ದ್ವಾರಮಂಟಪ, ಪ್ರಕಾರ, ಬಲಿಪೀಠ, ಗರುಡಗಂಬ** ಸೇರಿದಂತೆ ದೇವಾಲಯದ ಪ್ರಮುಖ ವಾಸ್ತುಶಿಲ್ಪದ ಅಂಗಗಳನ್ನು ಕಾಣಬಹುದು. ರ್ವಾಭಿಮುಖವಾಗಿರುವ ದೇವಾಲಯದ ಗರ್ಭಗೃಹದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹ ಪ್ರತಿಷ್ಠಾಪಿತವಾಗಿದೆ. ಪ್ರತಿನಿತ್ಯ ಸ್ವಾಮಿಯ ದರ್ಶನ ಹಾಗೂ ಪೂಜೆಗಾಗಿ ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ.

ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ದೇಗುಲಕ್ಕೆ ದುರಸ್ತಿ ಕಾರ್ಯಗಳನ್ನ ಕೈಗೊಳ್ಳಲಾಗಿದೆ. ಹೊಯ್ಸಳ ಹಾಗೂ ವಿಜಯನಗರ ಕಾಲದಲ್ಲಿ ದೇವಾಲಯವನ್ನು ದುರಸ್ತಿಗೊಳಿಸುವುದರ ಜೊತೆಗೆ ವಿಸ್ತರಣಾ ಕಾರ್ಯಗಳೂ ನಡೆದಿವೆಯಂತೆ. ದೇವಾಲಯದ ಮುಂಭಾಗದಲ್ಲಿರುವ ಬೃಹತ್ತಾದ ಮಹಾದ್ವಾರ ವಿಜಯನಗರ ಕಾಲಕ್ಕೆ ಸೇರಿದದ್ದು ಎಂದು ಹೇಳಲಾಗಿದ್ದು, ಇತಿಹಾಸವನ್ನು ಉಳಿಸಿಕೊಂಡಿರುವ ಪ್ರಮುಖ ಕುರುಹುಗಳಲ್ಲಿ ಒಂದಾಗಿದೆ.
ದೇವಾಲಯದ ಸಂಕೀರ್ಣದ ಈಶಾನ್ಯ ಭಾಗದಲ್ಲಿ ಒಂದು ಸಣ್ಣ ಶಿವಾಲಯವೂ ಇದೆ. ಈ ಶಿವಾಲಯವನ್ನು ಸಹ ಚೋಳರ ಕಾಲದಲ್ಲಿಯೇ ನಿರ್ಮಿಸಲಾಗಿದೆಯಂತೆ. ಹೀಗಾಗಿ ಒಂದೇ ದೇವಾಲಯದ ಪರಿಸರದಲ್ಲಿ ವಿವಿಧ ಕಾಲಘಟ್ಟಗಳ ಇತಿಹಾಸದ ಹೆಜ್ಜೆಗುರುತುಗಳನ್ನು ಕಾಣಬಹುದಾಗಿದೆ.
ನಿತ್ಯವೂ ನಡೆಯುವ ಪೂಜಾ ಕೈಂಕರ್ಯಗಳು
ಅತ್ಯಂತ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ದೇಗುಲದಲ್ಲಿ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಭಕ್ತರು ತಮ್ಮ ಮನಸ್ಸಿನಲ್ಲಿ ನೆನೆಸಿಕೊಂಡ ಕಾರ್ಯಗಳು ನೆರವೇರಿದಾಗ ದೇವರಿಗೆ ಹರಕೆ ಒಪ್ಪಿಸುವ ಸಂಪ್ರದಾಯವೂ ಇಲ್ಲಿದೆ. ಮಕ್ಕಳಿಗೆ ಮುಡಿ ಕೊಡುವುದು, ಹಣದ ರೂಪದಲ್ಲಿ ಕಾಣಿಕೆ ಸಲ್ಲಿಸುವುದು, ದೇವರಿಗೆ ಚಿನ್ನ, ಬೆಳ್ಳಿ ಹಾಗೂ ವಸ್ತ್ರಗಳನ್ನು ದಾನವಾಗಿ ನೀಡುವುದು ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ಇಲ್ಲಿ ನಡೆಯುತ್ತವೆ.
ಅಷ್ಟೇ ಅಲ್ಲದೆ, ಯಾವುದೇ ಜಾತಿ-ಧರ್ಮದ ಭೇದಭಾವವಿಲ್ಲದೆ ವಿವಿಧ ಜಾತಿ-ಜನಾಂಗದವರ ವಿವಾಹ ಕಾರ್ಯಕ್ರಮಗಳೂ ಇಲ್ಲಿ ನಡೆಯುತ್ತವೆ ಎಂಬುದು ಈ ದೇಗುಲದ ಮತ್ತೊಂದು ವಿಶೇಷತೆ.

ರಾಷ್ಟ್ರೀಯ ಸಂರಕ್ಷಿತ ಸ್ಮಾರಕ
ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಹಾಗೂ ಅವಶೇಷಗಳ ಅಧಿನಿಯಮ, 1958ರ ಅಡಿಯಲ್ಲಿ ಈ ದೇವಾಲಯವನ್ನು ಪ್ರಾಚೀನ ಹಾಗೂ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಸಂರಕ್ಷಿತ ಸ್ಮಾರಕವಾಗಿರುವುದರಿಂದ ಇದರ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಯಾವುದೇ ಕೃತ್ಯಕ್ಕೆ ಕಾನೂನು ಕ್ರಮ ಅನ್ವಯಿಸುತ್ತದೆ. ಸ್ಮಾರಕವನ್ನು ನಾಶಪಡಿಸುವುದು, ಸ್ಥಳಾಂತರಿಸುವುದು, ಹಾನಿಯುಂಟುಮಾಡುವುದು, ಬದಲಿಸುವುದು, ವಿಕೃತಗೊಳಿಸುವುದು ಅಥವಾ ದುರುಪಯೋಗಪಡಿಸಿಕೊಳ್ಳುವಂತಹ ಕೃತ್ಯಗಳಿಗೆ ಕಾನೂನಿನ ಪ್ರಕಾರ ಕಾರಾಗೃಹ ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶವಿದೆ.
ಹೀಗಾಗಿ ಈ ದೇವಾಲಯ ಕೇವಲ ಭಕ್ತಿಯ ಕೇಂದ್ರವಷ್ಟೇ ಅಲ್ಲ,ನಮ್ಮ ಹಿಂದಿನ ತಲೆಮಾರುಗಳ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಮೂಲ್ಯ ಪರಂಪರೆಯೂ ಆಗಿದೆ.
ಹಸಿರಿನ ನಡುವೆ ವಿಶಾಲ ಉದ್ಯಾನವನ
ಇಂದು ಬಹುತೇಕ ಪ್ರವಾಸಿ ತಾಣಗಳಲ್ಲಿ ಉದ್ಯಾನವನಗಳು ಪ್ರವಾಸಿಗರಿಗೆ ವಿಶ್ರಾಂತಿ ನೀಡುವ ಪ್ರಮುಖ ಭಾಗವಾಗಿವೆ. ಅದೇ ರೀತಿ ಮಾರೇಹಳ್ಳಿಯ ಈ ದೇವಾಲಯದ ಸುತ್ತಲೂ ಸಹ ಹಸಿರಿನಿಂದ ಕೂಡಿದ ವಿಶಾಲ ಉದ್ಯಾನವನವನ್ನು ನಿರ್ಮಿಸಲಾಗಿದೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗರು ಇಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ದೇವಾಲಯದ ಇತಿಹಾಸವನ್ನು ತಿಳಿದುಕೊಳ್ಳುವುದರ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು. ಸುತ್ತಲೂ ಹಸಿರು ವಾತಾವರಣವಿರುವುದರಿಂದ ಮನಸ್ಸಿಗೆ ಮುದ ನೀಡುವ ಶಾಂತ ವಾತಾವರಣವೂ ಇಲ್ಲಿ ದೊರೆಯುತ್ತದೆ. ಕೆಲವರು ಇಲ್ಲಿ ಕುಳಿತು ಭಕ್ತಿ ಗೀತೆಗಳನ್ನು ಗುನುಗುತ್ತಾ ಸಮಯ ಕಳೆಯುವುದೂ ಕಂಡುಬರುತ್ತದೆ. ಹೀಗಾಗಿ ಈ ಉದ್ಯಾನವನ ದೇವಾಲಯಕ್ಕೆ ಬರುವವರಿಗೆ ವಿಶ್ರಾಂತಿಯ ತಾಣವಾಗಿಯೂ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಸ್ಥಳವಾಗಿಯೂ ರೂಪುಗೊಂಡಿದೆ.
ಇತಿಹಾಸ, ಭಕ್ತಿ ಮತ್ತು ಪ್ರಕೃತಿ ಒಂದೇ ಕಡೆ!
ಮಾರೇಹಳ್ಳಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ಕೇವಲ ಪೂಜಾ ಸ್ಥಳವಲ್ಲ. ಚೋಳರು, ಹೊಯ್ಸಳರು, ವಿಜಯನಗರ ಅರಸರು ಹಾಗೂ ನಂತರದ ಇತಿಹಾಸದ ವಿವಿಧ ಕಾಲಘಟ್ಟಗಳ ಕುರುಹುಗಳನ್ನು ತನ್ನೊಳಗೆ ಉಳಿಸಿಕೊಂಡಿರುವ ಐತಿಹಾಸಿಕ ಪರಂಪರೆಯ ತಾಣವಾಗಿದೆ.
ಒಂದೆಡೆ ಪುರಾತನ ವಾಸ್ತುಶಿಲ್ಪ, ಮತ್ತೊಂದೆಡೆ ಭಕ್ತಿಯ ವಾತಾವರಣ… ಇದರ ಜೊತೆಗೆ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಪ್ರಕೃತಿ… ಈ ಮೂರೂ ಒಂದಾಗಿ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತವೆ.
ಇತಿಹಾಸವನ್ನು ಅರಿಯಲು ಬಯಸುವವರು, ಪುರಾತನ ವಾಸ್ತುಶಿಲ್ಪವನ್ನು ನೋಡಲು ಇಚ್ಛಿಸುವವರು ಹಾಗೂ ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬಯಸುವವರು ಒಮ್ಮೆ ಮಾರೇಹಳ್ಳಿಯ ಈ ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡಲೇಬೇಕು.

