ಯಮುನಾ ನದಿಯ ಪ್ರಮುಖ ಉಪನದಿಯಾದ ಟೋನ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಕಿಶಾವು ಬಹುಉದ್ದೇಶಿತ ಯೋಜನೆ ಹಲವು ವರ್ಷಗಳಿಂದ ಅಂತರರಾಜ್ಯ ನೀರು ಹಂಚಿಕೆ ಮತ್ತು ವೆಚ್ಚ ಹಂಚಿಕೆಯ ವಿಚಾರದಲ್ಲಿ ಬಾಕಿ ಉಳಿದಿತ್ತು. ಇದೀಗ ಸೆಪ್ಟೆಂಬರ್ 15, 2026ರಂದು ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಸೇರಿ ಆರು ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, ಯೋಜನೆಗೆ ಮತ್ತೆ ವೇಗ ಸಿಕ್ಕಿದೆ.
ಹಾಗಿದ್ರೆ ಕಿಶಾವು ಯೋಜನೆ ಎಂದರೇನು? ಈ ಯೋಜನೆಯಿಂದ 6 ರಾಜ್ಯಗಳಿಗೆ ಆಗುವ ಪ್ರಯೋಜನಗಳೇನು? ಯೋಜನೆ ಇಷ್ಟು ವಿಳಂಬವಾಗಿದ್ದು ಏಕೆ? ವೆಚ್ಚ ಎಷ್ಟು ಎಂಬ ಕುರಿತು ಈ ಕೆಳಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಕಿಶಾವು ಯೋಜನೆ ಎಂದರೇನು?
ಕಿಶಾವು ಒಂದು ಬಹುಉದ್ದೇಶಿತ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆ. ಇದು ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆ ಮತ್ತು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಗಡಿಯಲ್ಲಿ ಹರಿಯುವ ಟೋನ್ಸ್ ನದಿಯ ಮೇಲೆ ನಿರ್ಮಾಣವಾಗಲಿದೆ. ಟೋನ್ಸ್ ನದಿ ಮುಂದೆ ಯಮುನಾ ನದಿಯನ್ನು ಸೇರುತ್ತದೆ.
ಯೋಜನೆಯ ಅಧಿಕೃತ ವಿನ್ಯಾಸದಲ್ಲಿ ಸುಮಾರು 236 ಮೀಟರ್ ಎತ್ತರದ ಕಾಂಕ್ರೀಟ್ ಗ್ರಾವಿಟಿ ಡ್ಯಾಂ, 1,324 ಮಿಲಿಯನ್ ಕ್ಯುಬಿಕ್ ಮೀಟರ್ (MCM) ಲೈವ್ ಸ್ಟೋರೇಜ್ ಮತ್ತು 660 ಮೆಗಾವಾಟ್‌ಗಳ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯ ಉಲ್ಲೇಖಿಸಲಾಗಿದೆ.
ಏಕೆ ಇಷ್ಟು ವರ್ಷ ವಿಳಂಬವಾಯಿತು?
ಕಿಶಾವು ಯೋಜನೆ ಹೊಸ ಯೋಜನೆಯಲ್ಲ. ಹಲವು ವರ್ಷಗಳಿಂದ ಇದರ ಕುರಿತು ಚರ್ಚೆ ನಡೆಯುತ್ತಿತ್ತು. ಆದರೆ ಮುಖ್ಯವಾಗಿ ನೀರಿನ ಹಂಚಿಕೆ, ಯೋಜನಾ ವೆಚ್ಚವನ್ನು ಯಾರು ಎಷ್ಟು ಭರಿಸಬೇಕು ಮತ್ತು ವಿವಿಧ ರಾಜ್ಯಗಳ ಹಿತಾಸಕ್ತಿಗಳನ್ನು ಹೇಗೆ ಹೊಂದಿಸಬೇಕು ಎಂಬ ವಿಚಾರಗಳಲ್ಲಿ ಒಮ್ಮತ ಮೂಡಿರಲಿಲ್ಲ.
ಇದೀಗ ಆರು ರಾಜ್ಯಗಳು ಒಪ್ಪಂದಕ್ಕೆ ಬಂದಿರುವುದರಿಂದ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಆಡಳಿತಾತ್ಮಕ ದಾರಿ ತೆರೆದಿದೆ. ಯೋಜನೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ ಇನ್ನೂ ಪರಿಶೀಲನೆಯ ಹಂತದಲ್ಲಿದ್ದು, ಅಗತ್ಯ ಅನುಮೋದನೆಗಳ ನಂತರ ಮುಂದಿನ ಕಾಮಗಾರಿಗಳು ನಡೆಯಲಿವೆ.
6 ರಾಜ್ಯಗಳು ಯಾವುವು?
ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ರಾಜ್ಯಗಳು ಈ ಯೋಜನೆಯಿಂದ ಪ್ರಯೋಜನ ಪಡೆಯಲಿವೆ. ಈ ರಾಜ್ಯಗಳು ಯಮುನಾ ನದಿ ಜಲಾನಯನ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿವೆ.
ಎಷ್ಟು ನೀರು ಸಂಗ್ರಹವಾಗಲಿದೆ?
ಅಧಿಕೃತ ಯೋಜನಾ ವಿವರಗಳ ಪ್ರಕಾರ, ಅಣೆಕಟ್ಟಿನಲ್ಲಿ ಸುಮಾರು 1,324 MCM ಲೈವ್ ಸ್ಟೋರೇಜ್ ಇರಲಿದೆ. ನದಿಯ ನೀರಿನ ಹರಿವನ್ನು ನಿಯಂತ್ರಿಸಿ ಕೆಳಭಾಗದ ಪ್ರದೇಶಗಳಿಗೆ ಹೆಚ್ಚು ನಿಯಮಿತ ನೀರು ಲಭ್ಯವಾಗುವಂತೆ ಮಾಡುವುದು ಇದರ ಪ್ರಮುಖ ಉದ್ದೇಶ.
ಇತ್ತೀಚಿನ ಒಪ್ಪಂದದ ಪ್ರಕಾರ, ಸಂಗ್ರಹಿತ ನೀರಿನ ಹಂಚಿಕೆಯಲ್ಲಿ ಹರಿಯಾಣಕ್ಕೆ 633 MCM, ಉತ್ತರ ಪ್ರದೇಶಕ್ಕೆ 411 MCM, ರಾಜಸ್ಥಾನಕ್ಕೆ 124 MCM, ದೆಹಲಿಗೆ 80 MCM ಮತ್ತು ಉತ್ತರಾಖಂಡಕ್ಕೆ 34 MCM ಎಂದು ವಿವರಿಸಲಾಗಿದೆ. ಉಳಿದ ವ್ಯವಸ್ಥೆಯಲ್ಲಿ ಹಿಮಾಚಲ ಪ್ರದೇಶದ ಪಾಲು ಮತ್ತು ಯೋಜನೆಯ ಇತರ ಅಂಶಗಳನ್ನು ಪರಿಗಣಿಸಲಾಗಿದೆ.
ದೆಹಲಿಗೆ ಏನು ಲಾಭ?
ದೆಹಲಿಯ ನೀರಿನ ಭದ್ರತೆಯನ್ನು ಹೆಚ್ಚಿಸುವುದು ಕಿಶಾವು ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. ಟೋನ್ಸ್ ನದಿಯಲ್ಲಿ ನೀರನ್ನು ಸಂಗ್ರಹಿಸಿ ನಿಯಂತ್ರಿತವಾಗಿ ಕೆಳಭಾಗಕ್ಕೆ ಹರಿಸುವುದರಿಂದ ಯಮುನಾ ಜಲ ವ್ಯವಸ್ಥೆಯಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚು ನಿರ್ವಹಿಸಬಹುದಾದ ರೀತಿಯಲ್ಲಿ ಮಾಡಬಹುದು. ಇದರ ಪರಿಣಾಮ ದೆಹಲಿಯ ಕುಡಿಯುವ ನೀರಿನ ಪೂರೈಕೆಗೆ ನೆರವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಪ್ರಕಾರ, ಯೋಜನೆಯಿಂದ ಯಮುನಾ ನದಿಗೆ ಪರಿಸರದ ದೃಷ್ಟಿಯಿಂದ ಅಗತ್ಯವಿರುವ ನೀರಿನ ಹರಿವಿಗೂ ನೆರವು ಸಿಗಬಹುದು.
ಹರಿಯಾಣ ಮತ್ತು ಉತ್ತರ ಪ್ರದೇಶ:
ಹರಿಯಾಣಕ್ಕೆ, ಯಮುನಾ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚು ನಿಯಮಿತಗೊಳಿಸುವುದು ಪ್ರಮುಖ ಪ್ರಯೋಜನ. ವಿಶೇಷವಾಗಿ ನೀರಾವರಿ ಮತ್ತು ಇತರ ನೀರಿನ ಅಗತ್ಯಗಳಿಗೆ ಹೆಚ್ಚು ನಿರೀಕ್ಷಿತ ಪೂರೈಕೆ ಸಿಗುವ ಸಾಧ್ಯತೆಯಿದೆ. ಉತ್ತರ ಪ್ರದೇಶಕ್ಕೆ, ಯಮುನಾ ವ್ಯವಸ್ಥೆಯ ನೀರಿನ ಹರಿವಿನ ನಿಯಂತ್ರಣದಿಂದ ಕೃಷಿ ಮತ್ತು ಇತರ ಬಳಕೆಗಳಿಗೆ ನೀರಿನ ಲಭ್ಯತೆಯನ್ನು ಸುಧಾರಿಸುವ ಉದ್ದೇಶವಿದೆ.
ರಾಜಸ್ಥಾನಕ್ಕೆ ಏನು ಲಾಭ?
ರಾಜಸ್ಥಾನದ ಪಾಲಿಗೆ ಈ ಯೋಜನೆ ವಿಶೇಷವಾಗಿ ನೀರಿನ ಕೊರತೆ ಎದುರಿಸುವ ಪ್ರದೇಶಗಳಿಗೆ ನೀರು ಒದಗಿಸುವ ದೃಷ್ಟಿಯಿಂದ ಮಹತ್ವದ್ದಾಗಿದೆ. ಇತ್ತೀಚಿನ ಒಪ್ಪಂದದ ಪ್ರಕಾರ ರಾಜಸ್ಥಾನಕ್ಕೆ 124 MCM ನೀರು ದೊರೆಯಲಿದೆ. ಇದು ವಿಶೇಷವಾಗಿ ಶೇಖಾವಾಟಿ ಪ್ರದೇಶದ ನೀರಿನ ಅಗತ್ಯಗಳಿಗೆ ನೆರವಾಗುವ ನಿರೀಕ್ಷೆಯಿದೆ.
ವಿದ್ಯುತ್ ಉತ್ಪಾದನೆ:
ಕಿಶಾವು ಕೇವಲ ನೀರಿನ ಯೋಜನೆಯಲ್ಲ. ಇದು 660 ಮೆಗಾವಾಟ್ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಯೋಜನೆಯಾಗಿದೆ. ಅಧಿಕೃತ ಯೋಜನಾ ವಿವರಗಳ ಪ್ರಕಾರ, ವಾರ್ಷಿಕ ವಿದ್ಯುತ್ ಉತ್ಪಾದನೆ ಸುಮಾರು 1,379 ಮಿಲಿಯನ್ ಯೂನಿಟ್ಸ್ (MU) ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರದ ಇತ್ತೀಚಿನ ಪ್ರಕಟಣೆಯಲ್ಲಿ ಯೋಜನೆಯಿಂದ ಸುಮಾರು 1,476 ಮಿಲಿಯನ್ ಯೂನಿಟ್ಸ್ ಶುದ್ಧ ಜಲವಿದ್ಯುತ್ ಉತ್ಪಾದನೆಯಾಗಲಿದೆ ಎಂದು ತಿಳಿಸಲಾಗಿದೆ. ಯೋಜನೆಯ ವಿವಿಧ ಹಂತಗಳ ವಿನ್ಯಾಸ/ಅಂದಾಜುಗಳಲ್ಲಿ ಅಂಕಿಅಂಶಗಳ ವ್ಯತ್ಯಾಸ ಕಾಣಿಸಿಕೊಳ್ಳುತ್ತಿರುವುದರಿಂದ, ಅಂತಿಮ ಅನುಮೋದಿತ ಯೋಜನಾ ವಿವರವೇ ಅಂತಿಮ ಮಾನದಂಡವಾಗಲಿದೆ.
97 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ:
ಕೇಂದ್ರ ಸರ್ಕಾರದ ಪ್ರಕಾರ, ಕಿಶಾವು ಯೋಜನೆಯಿಂದ ಸುಮಾರು 97,000 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಂದರೆ ಯೋಜನೆಯ ಪ್ರಯೋಜನ ಕೇವಲ ನಗರಗಳ ಕುಡಿಯುವ ನೀರಿಗೆ ಸೀಮಿತವಾಗದೆ ಕೃಷಿ ಕ್ಷೇತ್ರಕ್ಕೂ ವಿಸ್ತರಿಸಲಿದೆ.
ಯೋಜನೆಯ ವೆಚ್ಚವನ್ನು ಯಾರು ಭರಿಸುತ್ತಾರೆ?
ಕಿಶಾವು ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ. ಇತ್ತೀಚಿನ ಒಪ್ಪಂದದ ಪ್ರಕಾರ, ಯೋಜನೆಯ ನೀರಿನ ಘಟಕದ ವೆಚ್ಚದ ಸುಮಾರು 90% ಅನ್ನು ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ 10% ವೆಚ್ಚವನ್ನು ಆರು ಪಾಲುದಾರ ರಾಜ್ಯಗಳು ಹಂಚಿಕೊಳ್ಳಲಿವೆ.
ಆರು ರಾಜ್ಯಗಳ ಒಪ್ಪಂದದಿಂದ ದೀರ್ಘಕಾಲದ ಪ್ರಮುಖ ಅಡೆತಡೆ ನಿವಾರಣೆಯಾಗಿದ್ದರೂ, ಅಣೆಕಟ್ಟು ತಕ್ಷಣ ನಿರ್ಮಾಣವಾಗಲ್ಲ. ಯೋಜನೆಗೆ ಅಗತ್ಯವಿರುವ ಕೇಂದ್ರ ಅನುಮೋದನೆಗಳು, ವಿವರವಾದ ಯೋಜನಾ ವರದಿ ಪರಿಶೀಲನೆ, ಭೂ ಸಮೀಕ್ಷೆ, ಪರಿಸರ ಮತ್ತು ಪುನರ್ವಸತಿ ಸಂಬಂಧಿತ ಪ್ರಕ್ರಿಯೆಗಳು ಸೇರಿದಂತೆ ಹಲವು ಹಂತಗಳು ಇನ್ನೂ ಬಾಕಿಯಿವೆ.
ಈ ಯೋಜನೆಯ ಪರಿಣಾಮ ಕೇವಲ ಒಂದು ಅಣೆಕಟ್ಟಿನ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಇದು ನೀರು ಹಂಚಿಕೆ , ನೀರಾವರಿ , ಕುಡಿಯುವ ನೀರು, ಜಲವಿದ್ಯುತ್, ಯಮುನಾ ಜಲ ನಿರ್ವಹಣೆ ಎಲ್ಲವನ್ನು ಒಟ್ಟುಗೂಡಿಸುವ ಅಂತರರಾಜ್ಯ ಯೋಜನೆಯಾಗಿದೆ.
ಕಿಶಾವು ಯೋಜನೆ ಪೂರ್ಣಗೊಂಡರೆ ಉತ್ತರ ಭಾರತದ ನೀರಿನ ನಿರ್ವಹಣೆಯಲ್ಲಿ ಮಹತ್ವದ ಯೋಜನೆಯಾಗುವ ಸಾಧ್ಯತೆಯಿದೆ. ಆದರೆ ಅದರ ಅಂತಿಮ ಪರಿಣಾಮ ಯೋಜನೆ ಪೂರ್ಣಗೊಂಡು ನೀರು ಮತ್ತು ವಿದ್ಯುತ್ ಪೂರೈಕೆ ಆರಂಭವಾದ ಬಳಿಕವೇ ಸ್ಪಷ್ಟವಾಗಲಿದೆ.

