ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ, ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ರಾಮರಸ’ ತನ್ನ ಚಿತ್ರೀಕರಣದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ ಬಿರುಸಿನ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರು ಚಿತ್ರತಂಡದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದಕ್ಕಿಂತಲೂ ಮಿಗಿಲಾದ ಒಂದು ವಿಶಿಷ್ಟ ಮತ್ತು ಅದ್ಭುತ ಸಿನಿಮಾ ಅನುಭವವನ್ನು ನೀಡಲು ‘ರಾಮರಸ’ ಸಜ್ಜಾಗುತ್ತಿದೆ. ಈಗಾಗಲೇ ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರಕ್ಕೆ ಈಗ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ.
ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಅದಾ ಶರ್ಮಾ ಈ ಚಿತ್ರದ ಪ್ರಮುಖ ಪಾತ್ರವೊಂದರ ಮೂಲಕ ತಂಡವನ್ನು ಸೇರಿಕೊಂಡಿದ್ದಾರೆ. ತಮ್ಮ ವೈವಿಧ್ಯಮಯ ನಟನೆಯಿಂದ ಗುರುತಿಸಿಕೊಂಡಿರುವ ಅದಾ ಶರ್ಮಾ, ಈ ಸಿನಿಮಾದಲ್ಲಿ ಅತ್ಯಂತ ವಿಭಿನ್ನ ಮತ್ತು ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ತಾರಾಬಳಗಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ.
ಇಡೀ ಸೃಷ್ಟಿಯೇ ಪರಾಶಕ್ತಿಯ ಲೀಲೆ. ಹಾಲುಣಿಸುವವಳೂ ತಾಯಿ. ಮಣ್ಣು ಮುಕ್ಕಿಸುವವಳೂ ತಾಯಿ. ಆದರೆ ಹಾಲು ಯಾವುದು, ಮಣ್ಣು ಯಾವುದು ಅನ್ನುವುದರ ಅರಿವು ಪಡೆಯುವುದೇ ಇಡೀ ಬದುಕಿನ ಮಾಯೆ. ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸಲು ತಾಯಿ ರಾಮರಸದಲ್ಲಿ ಯಾವ ರೂಪ ತಾಳಿ ಬರಲಿದ್ದಾಳೆ ಅದನ್ನು ನೋಡಿಯೇ ಸವಿಯಬೇಕು. ಅಂದಹಾಗೆ ರಾಮರಸ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ವಿಜೇತ ಕಾರ್ತಿಕ್ ಮಹೇಶ್, ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್, ಮತ್ತು ಗ್ಲಾಮರಸ್ ನಟಿ ಹೆಬ್ಬಾ ಪಟೇಲ್ ಸೇರಿದಂತೆ ದೊಡ್ಡ ತಾರಾಗಣವೇ ಒಂದೇ ಪರದೆಯ ಮೇಲೆ ಅಬ್ಬರಿಸಲಿದೆ.

