– ಸ್ಥಳೀಯ ಸಂಸ್ಕೃತಿಗೆ ಅನ್ಯಾಯ ಎಂದ ಮಾಜಿ ಸಚಿವ
ಬೆಂಗಳೂರು: 6ನೇ ತರಗತಿಗಾಗಿ NCERT(ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಬಿಡುಗಡೆ ಮಾಡಿರುವ ಕನ್ನಡ ಪಠ್ಯಪುಸ್ತಕಕ್ಕೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದೊಂದಿಗೆ ಯಾವುದೇ ಚರ್ಚೆ ನಡೆಸದೇ ಪುಸ್ತಕ ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪುಸ್ತಕಕ್ಕೆ “ಕೃಷ್ಣ” ಎಂದು ಹೆಸರಿಡಲಾಗಿದೆ. ಕನ್ನಡದ ವೈಚಾರಿಕ ಪರಂಪರೆ, ಸ್ಥಳೀಯ ಸಂಸ್ಕೃತಿ ಹಾಗೂ ಪ್ರಾದೇಶಿಕ ಜೀವನ ಶೈಲಿಗೆ ಪುಸ್ತಕದಲ್ಲಿ ಆದ್ಯತೆ ನೀಡಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಜೀವನ ಪದ್ಧತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಮತೋಲನ ಆಹಾರದ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರದ ಕುರಿತು ಯಾವುದೇ ಉಲ್ಲೇಖವಿಲ್ಲ. ಕೇವಲ ಸಸ್ಯಾಹಾರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಇದು ಸಮತೋಲಿತ ನಿರೂಪಣೆ ಅಲ್ಲ ಎಂದು ಮಧು ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಾನು ಹಿಂದೂಗೆ ಹುಟ್ಟಿದವನು. ಕೃಷ್ಣನ ಬಗ್ಗೆ ನನಗೆ ಯಾವುದೇ ವಿರೋಧ ಇಲ್ಲ. ಆದರೆ ಧರ್ಮ ಮತ್ತು ಶಿಕ್ಷಣವನ್ನು ಬೆರೆಸಿ ಮಕ್ಕಳನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಬಾರದು” ಎಂದು ಅವರು ಹೇಳಿದರು. ನಾನು ರಕ್ತದಲ್ಲಿ ಹಿಂದೂ. ನಕಲಿ ಹಾಗೂ ಡೂಪ್ಲಿಕೇಟ್ ಹಿಂದೂಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಾನು ಸಂವಿಧಾನದ ಪೀಠಿಕೆಯನ್ನು ಓದಿಸುವವನು. ಶಿಕ್ಷಣದಲ್ಲಿ ಸಮಾನತೆ ಇರಬೇಕು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯದ ಡಿಎಸ್‌ಇಆರ್‌ಟಿ ಈಗಾಗಲೇ ‘ಸವಿ ಕನ್ನಡ’, ‘ಸಿರಿ ಕನ್ನಡ’ ಹಾಗೂ ‘ತಿಳಿ ಕನ್ನಡ’ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ. ಅವುಗಳನ್ನು ಪರಿಗಣಿಸದೇ ಹೊಸ ಪುಸ್ತಕ ಬಿಡುಗಡೆ ಮಾಡಿರುವುದು ಕನ್ನಡದ ಅಸ್ಮಿತೆಗೆ ಅಪಚಾರ ಎಂದು ಅವರು ಆರೋಪಿಸಿದರು. ಕೂಡಲೇ ಈ ಪುಸ್ತಕವನ್ನು ಹಿಂದಕ್ಕೆ ಪಡೆದು, ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಮತ್ತು ಪರಂಪರೆಯನ್ನು ಒಳಗೊಂಡ ಹೊಸ ಪುಸ್ತಕವನ್ನು ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಫುಟ್ ಪಾತ್ ಒತ್ತುವರಿ ತೆರವಿಗೆ ಡೆಡ್ ಲೈನ್ – 10,000 ರೂ. ದಂಡದ ಎಚ್ಚರಿಕೆ ಕೊಟ್ಟ ಕೃಷ್ಣ ಭೈರೇಗೌಡ
ಈ ವಿಚಾರವಾಗಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮನವಿ ಮಾಡುತ್ತೇನೆ. ಅಗತ್ಯವಿದ್ದರೆ ಹೋರಾಟದ ರೂಪ ನೀಡಲಾಗುವುದು ಎಂದು ಮಧು ಬಂಗಾರಪ್ಪ ಎಚ್ಚರಿಕೆ ನೀಡಿದರು. ಇದೇ ವೇಳೆ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಕೆಲವು ಖಾಸಗಿ ಶಾಲೆ ಹಾಗೂ ಕಾಲೇಜುಗಳ ಪ್ರತಿನಿಧಿಗಳನ್ನು ಸೇರಿಸಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಣೆ-ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ
