ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದಲ್ಲಿ ಕರಾವಳಿಯ ಸಾಂಪ್ರದಾಯಿಕ ಜಾನಪದ ಕ್ರೀಡೆ ‘ಕಂಬಳ’ದ ಅದ್ಭುತ ಶಿಲ್ಪ ಕಲಾಕೃತಿಯೊಂದು ಜಗತ್ತಿನಾದ್ಯಂತ ಆಗಮಿಸುವ ಪ್ರಯಾಣಿಕರನ್ನು ಅತ್ಯಂತ ಆಕರ್ಷಕವಾಗಿ ಸ್ವಾಗತಿಸುತ್ತಿದೆ.
ಅದಾನಿ ಸಂಸ್ಥೆಯ ಈ ಮೆಚ್ಚುಗೆಯ ಉಪಕ್ರಮವು ತುಳುನಾಡಿನ ಸಾಂಪ್ರದಾಯಿಕ ವೈಭವವನ್ನು ದೇಶ-ವಿದೇಶದ ಜನರಿಗೆ ಪರಿಚಯಿಸುವ ಸುಂದರ ವೇದಿಕೆಯಾಗಿದೆ.
ಕರಾವಳಿಯ ಜಾನಪದ ಕ್ರೀಡೆಯ ಶಕ್ತಿ, ವೇಗ ಮತ್ತು ಸಂಸ್ಕೃತಿಯ ಸ್ಪಂದನವನ್ನು ಫೈಬರ್ ಮಾಧ್ಯಮದಲ್ಲಿ ಜೀವಂತಗೊಳಿಸುವಂತಹ ಈ ಪರಿಕಲ್ಪನೆಯ ಹಿಂದೆ ಇರುವುದು ಸೃಜನಶೀಲ ಚಿಂತಕ ಹಾಗೂ ಪ್ರಸಿದ್ಧ ದೃಶ್ಯ ಕಲಾವಿದ ಹರೀಶ್ ಕೊಡಿಯಾಲ್‌ಬೈಲ್.
’ಆರ್ಟ್ ಕೆನರಾ’ (Art Kanara) ಹಾಗೂ ‘Scube ART’ ಗ್ಯಾಲರಿಯ ಪ್ರಾಜೆಕ್ಟ್ ಮುಖ್ಯಸ್ಥರಾಗಿ, ತುಳುನಾಡಿನ ಮಣ್ಣಿನ ವಾಸನೆಯನ್ನು ಜಾಗತಿಕ ಮಟ್ಟದ ಕಲಾಕೃತಿಯಾಗಿ ಪರಿವರ್ತಿಸುವಲ್ಲಿ ಹರೀಶ್ ಅವರ ದೃಷ್ಟಿಕೋನ ಮತ್ತು ಸೃಜನಶೀಲತೆ ಪ್ರಮುಖ ಪಾತ್ರ ವಹಿಸಿದೆ.
ಅವರ ಈ ಕಲ್ಪನೆಗೆ ಕಲಾತ್ಮಕ ಜೀವ ತುಂಬಲು ಸಹ-ಕಲಾವಿದರಾದ ಭೂಷಣ್ ಶೆಟ್ಟಿ, ನಾಗರಾಜ್ ಬಜಾಲ್, ಚೇತನ್ ಕುಮಾರ್ ಮತ್ತು ಅಜಯ್ ಪಿತ್ರೋಡಿ ಅವರ ಶ್ರಮ ಅನನ್ಯವಾದುದು. ಜೊತೆಗೆ, ಕಲಾವಿದ ರಾಜೇಂದ್ರ ಕೇದಿಗೆ ಅವರ ಸಹಕಾರವೂ ಈ ಕಲಾಕೃತಿ ಮೂಡಿಬರಲು ಸಾಥ್ ನೀಡಿದೆ.

