– 5 ಕೋಟಿ ಭಕ್ತರಿಂದ ಗಂಗಾ ನದಿಯಿಂದ ಜಲ ಸಂಗ್ರಹ
ಡೆಹ್ರಾಡೂನ್: ವಾರ್ಷಿಕ ಕನ್ವರ್ ಯಾತ್ರೆ (Kanwar Yatra) ಮುಕ್ತಾಯಗೊಂಡ ಬೆನ್ನಲ್ಲೇ ಉತ್ತರಾಖಂಡದ (Uttarakhand) ಪವಿತ್ರ ನಗರ ಹರಿದ್ವಾರದಲ್ಲಿ ಈಗ ಭಾರೀ ಪ್ರಮಾಣದ ತ್ಯಾಜ್ಯದ ರಾಶಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಈ ಬಾರಿ ಸಾವನ್ ಮಾಸದಲ್ಲಿ ಗಂಗಾ ನದಿಯಿಂದ (Ganga water) ಪವಿತ್ರ ಜಲ ಸಂಗ್ರಹಿಸಲು ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದಾರೆ. ಶಿವರಾತ್ರಿ ಬಳಿಕ ಭಕ್ತರು ತಮ್ಮ ತಮ್ಮ ಊರುಗಳಿಗೆ ಮರಳಿದ ನಂತರ ಹರಿದ್ವಾರದ (Haridwar) ವಿವಿಧ ಘಾಟ್‌ಗಳು, ರಸ್ತೆಗಳು ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಸ ರಾಶಿ ಪತ್ತೆಯಾಗಿದೆ. ದೃಶ್ಯಗಳಲ್ಲಿ ಬಿಸಾಡಿದ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು, ಬಾಟಲಿಗಳು ಹಾಗೂ ಕನ್ವರ್‌ಗಳಿಗೆ ಬಳಸಿದ್ದ ವಿವಿಧ ವಸ್ತುಗಳು ಘಾಟ್‌ಗಳಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿರುವುದು ಕಂಡುಬಂದಿದೆ.

ಹರಿದ್ವಾರದ ನೂರಕ್ಕೂ ಹೆಚ್ಚು ಘಾಟ್‌ಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಹರ್ ಕಿ ಪೌರಿ ಘಾಟ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲಿನ ಬಟ್ಟೆ ಬದಲಿಸುವ ಕೊಠಡಿಗಳಲ್ಲಿ ಮೂತ್ರದಿಂದ ತುಂಬಿದ್ದ ನೀರಿನ ಬಾಟಲಿಗಳನ್ನ ಬಿಸಾಡಿರುವುದು ಕಂಡುಬಂದಿದೆ. ಈ ಬಾಟಲಿಗಳನ್ನು ಸ್ವಚ್ಛತಾ ಸಿಬ್ಬಂದಿ ಕೈಗವಸು ಅಥವಾ ಮಾಸ್ಕ್‌ಗಳಿಲ್ಲದೇ ಕೇವಲ ಸಲಿಕೆಯಿಂದ ತೆರವುಗೊಳಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರೊಬ್ಬರು ಈ ಬೆಳವಣಿಗೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಗಂಗಾ ನದಿಯನ್ನು ಪವಿತ್ರವೆಂದು ಭಾವಿಸಿ ಅದನ್ನು ತಲುಪಲು ಭಕ್ತರು ನೂರಾರು ಕಿಲೋಮೀಟರ್‌ಗಳಷ್ಟು ನಡೆದುಕೊಂಡು ಬರುತ್ತಾರೆ. ಆದರೆ ಅದೇ ಗಂಗಾ ತೀರವನ್ನ ಈ ರೀತಿಯಾಗಿ ಕಲುಷಿತಗೊಳಿಸುವುದು ವಿಪರ್ಯಾಸ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಕನ್ವರ್ ಯಾತ್ರೆ ಮತ್ತು ಶಿವರಾತ್ರಿ ಬಳಿಕ ಹರಿದ್ವಾರದಲ್ಲಿ ಸಂಗ್ರಹವಾದ ಕನಿಷ್ಠ 7,000 ಟನ್‌ಗಳಷ್ಟು ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಲಾಗಿದೆ. ಇದೀಗ ತ್ಯಾಜ್ಯದ ರಾಶಿಗಳು ಸಣ್ಣ ಗುಡ್ಡಗಳಂತೆ ಕಾಣುತ್ತಿವೆ.

