– ಮಡಿಕೇರಿಯಲ್ಲಿ ಅಕ್ಕಿ ಸಾಗಿಸುತ್ತಿದ್ದ ವಾಹನ ತಡೆ
– ಆಹಾರ ಇಲಾಖೆ ಅಧಿಕಾರಿಗಳಿಂದ ಅಕ್ಕಿ, ವಾಹನ ಜಪ್ತಿ
ಮಡಿಕೇರಿ: ಬಡವರಿಗೆ ಸಿಗಬೇಕಿದ್ದ ಪಡಿತರ ಅಕ್ಕಿ ಕಾಳಸಂತೆಗೆ ಸಾಗಿಸಲಾಗುತ್ತಿತ್ತಾ ಎಂಬ ಅನುಮಾನ ಮಡಿಕೇರಿಯಲ್ಲಿ (Madikeri) ಮೂಡಿದೆ. ನಗರದ ಸಂಪಿಗೆ ಕಟ್ಟೆ ಬಳಿ ಅನುಮಾನಾಸ್ಪದವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನ ಕೊಡಗು ಅಭಿವೃದ್ಧಿ ಸಮಿತಿಯ ಸದಸ್ಯರು ತಡೆದು ಪರಿಶೀಲನೆ ನಡೆಸಿದ್ದಾರೆ.
ವಾಹನ ಪರಿಶೀಲನೆ ವೇಳೆ 25 ಕೆಜಿ ತೂಕದ 60ಕ್ಕೂ ಅಧಿಕ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಅಕ್ಕಿ ಮೂಟೆಗಳನ್ನು ಪರಿಶೀಲಿಸಿದ ಸದಸ್ಯರು ಕೂಡಲೇ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಫುಡ್ ಇನ್ಸ್‌ಪೆಕ್ಟರ್ ವೀಣಾ ರಾತ್ರಿ ಸ್ಥಳಕ್ಕೆ ಆಗಮಿಸಿ ಅಕ್ಕಿಯನ್ನ ಪರಿಶೀಲಿಸಿದ್ದಾರೆ. ಈ ವೇಳೆ ಮಡಿಕೇರಿ ನಗರ ಠಾಣೆಯ ಎಸ್‌ಐ ಶ್ರೀಧರ್ ಅವರಿಗೂ ಮಾಹಿತಿ ನೀಡಲಾಗಿದೆ. ಬಳಿಕ ಅಧಿಕಾರಿಗಳು ಅಕ್ಕಿ ಮೂಟೆಗಳು ಹಾಗೂ ವಾಹನವನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಅಕ್ಕಿ ಎಲ್ಲಿಂದ ಬಂತು? ಎಲ್ಲಿಗೆ ಸಾಗಿಸಲಾಗುತ್ತಿತ್ತು?
ಪತ್ತೆಯಾಗಿರುವ ಅಕ್ಕಿ ಸೊಸೈಟಿಗೆ ಸೇರಬೇಕಿದ್ದ ಪಡಿತರ ಅಕ್ಕಿಯೇ ಎಂಬ ಅನುಮಾನ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಬಡವರ ಪಾಲಿನ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಗೆ ಸಾಗಿಸಲಾಗುತ್ತಿತ್ತಾ? ಹಣಕ್ಕಾಗಿ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತಾ? ಎಂಬ ಪ್ರಶ್ನೆಗಳು ಎದುರಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಇಲಾಖೆ ಅಧಿಕಾರಿ, ಮೇಲ್ನೋಟಕ್ಕೆ ಪತ್ತೆಯಾಗಿರುವ ಅಕ್ಕಿ ಸೊಸೈಟಿ ಅಕ್ಕಿಯಂತೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿ ನಗರದ ಮೋಹನ್ ಎಂಬುವವರಿಗೆ ಸೇರಿದ ಅಕ್ಕಿ ಮಿಲ್‌ನಿಂದ ಅಕ್ಕಿಯನ್ನ ಸಂಗ್ರಹಿಸಿ, ವಾಹನದಲ್ಲಿ ಕೋಡ್ಲಿಪೇಟೆಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ದೊರೆತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಡಿತರ ಅಕ್ಕಿ ಮಾರಾಟದ ಅನುಮಾನ
ಗ್ರಾಮೀಣ ಭಾಗದ ಕೆಲವರು ಸೊಸೈಟಿಯಲ್ಲಿ ಪಡೆಯುವ ಪಡಿತರ ಅಕ್ಕಿಯನ್ನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಪತ್ತೆಯಾಗಿರುವ ಅಕ್ಕಿಯ ಮೂಲ, ಸಾಗಾಟದ ಉದ್ದೇಶ ಹಾಗೂ ಇದರ ಹಿಂದೆ ಯಾರಾದರೂ ಅಕ್ರಮವಾಗಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟವಾಗಿರುವುದು ದೃಢಪಟ್ಟರೆ ಸಂಬಂಧಪಟ್ಟವರ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
60ಕ್ಕೂ ಅಧಿಕ ಮೂಟೆಗಳ ಅಕ್ಕಿಯ ಅಸಲಿ ಕಥೆ ಏನು?
ಒಟ್ಟಿನಲ್ಲಿ, ಬಡವರ ಪಾಲಿನ ಪಡಿತರ ಅಕ್ಕಿ ಅಕ್ರಮವಾಗಿ ಮಾರಾಟವಾಗುತ್ತಿತ್ತಾ? 60ಕ್ಕೂ ಅಧಿಕ ಅಕ್ಕಿ ಮೂಟೆಗಳು ನಿಜವಾಗಿಯೂ ಎಲ್ಲಿಂದ ಬಂದವು? ಅವು ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರ ಹಿಂದೆ ಯಾರಿದ್ದಾರೆ? ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕವೇ ಉತ್ತರ ಸಿಗಬೇಕಿದೆ. ಪಡಿತರ ಅಕ್ಕಿಯ ಅಕ್ರಮ ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಿ, ಬಡವರ ಪಾಲಿನ ಆಹಾರ ಧಾನ್ಯಗಳು ಅವರಿಗೆ ತಲುಪುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
