ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಖಾರಿಫ್ ಬರದ (Karnataka Drought) ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡವು (IMCT) ಅಕ್ಟೋಬರ್ 6 ರವರೆಗೆ ಜಿಲ್ಲೆಗಳಿಗೆ ಭೇಟಿ ನೀಡಲಿವೆ
ಅಧಿಕಾರಿಗಳ ಈ ತಂಡವನ್ನು ಒಟ್ಟು ಮೂರು ವಿಭಾಗಗಳಾಗಿ, ತಂಡ 1, ತಂಡ 2 ಮತ್ತು ತಂಡ 3 ಎಂದು ವಿಂಗಡಿಸಲಾಗಿದ್ದು, ಈ ತಂಡಗಳು ಬರ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿಯನ್ನು ಅವಲೋಕಿಸಲಿವೆ.
ತಂಡ 1
ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ಅವರ ನೇತೃತ್ವದ ಈ ತಂಡದಲ್ಲಿ ಉಪ ನಿರ್ದೇಶಕ ಚೇತ್ ರಾಮ್ ಮೀನಾ (ತಂಡದ ಸಂಯೋಜಕರು), ವಿಶೇಷ ಅಧಿಕಾರಿ (ಐ ಎಸ್ ಡಿ ) ಕರ್ನಲ್ ಅಮರೀಂದರ್ ಸಿಂಗ್ ಮತ್ತು ನಿರ್ದೇಶಕ ಡಾ. ಜೆ. ಹರ್ಷ ಸದಸ್ಯರಾಗಿದ್ದಾರೆ. ಈ ತಂಡವು ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಪರಿಶೀಲನೆ ನಡೆಸಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ
ತಂಡ 2
ಸಹಾಯಕ ಆಯುಕ್ತರಾದ ಡಾ. ಸುದಮ್ ಬಾಗ್ ಅವರ ನೇತೃತ್ವದ ತಂಡದಲ್ಲಿ ಸಹಾಯಕ ಸಲಹೆಗಾರರಾದ ಆಶಿಶ್ ಪಾಂಡೆ, ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮತ್ತು ಉಪ ನಿರ್ದೇಶಕ ಶ್ರೀ ಕರಣ್ ಚೌಧರಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡವು ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ.
ತಂಡ 3
ನಿರ್ದೇಶಕ ಡಾ. ಮನ್ ಸಿಂಗ್ ಅವರ ನೇತೃತ್ವದ ಮೂರನೇ ತಂಡದಲ್ಲಿ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಸದಸ್ಯರಾಗಿದ್ದಾರೆ. ಈ ತಂಡವು ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಖಾರಿಫ್ ಬರದ ತೀವ್ರತೆ ಮತ್ತು ಹಾನಿಯ ಕುರಿತು ಪರಿಶೀಲಿಸಲಿದೆ.
ಈ ಭೇಟಿಯ ನಂತರ ಕೇಂದ್ರ ತಂಡವು ರಾಜ್ಯದ ಬೆಳೆ ಹಾನಿ ಮತ್ತು ರೈತರ ಸಂಕಷ್ಟದ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ.

