ಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ (Drought Situation) ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ ರಾಜ್ಯ ಸರ್ಕಾರ (Karnataka Govt) ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಬರ ನಿರ್ವಹಣೆಯ ಅಂತರ್-ಸಚಿವಾಲಯ ತಂಡದೊಂದಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚಿಸಲಾಯಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ… pic.twitter.com/A7lVhdKLBZ
— DK Shivakumar (@DKShivakumar) October 3, 2026
ರಾಜ್ಯಕ್ಕೆ ಆಗಮಿಸಿರುವ ಅಂತರ ಸಚಿವಾಲಯದ ಕೇಂದ್ರ ತಂಡಕ್ಕೆ (IMCT) ರಾಜ್ಯ ಸರ್ಕಾರ ಬರದಿಂದ ಉಂಟಾಗಿರುವ ಬೆಳೆ ನಷ್ಟದ ವಿವರಗಳನ್ನ ಸಲ್ಲಿಸಿದೆ. ಈಗಾಗಲೇ ಘೋಷಿಸಲಾದ 177 ತಾಲೂಕುಗಳ ಪೈಕಿ ಎಲ್ಲ 177 ತಾಲೂಕುಗಳಲ್ಲೂ ಬೆಳೆ ನಷ್ಟದ ಮೌಲ್ಯಮಾಪನ ಪೂರ್ಣಗೊಂಡಿದ್ದು, ಉಳಿದ 40 ತಾಲೂಕುಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ.
ಸದ್ಯದ ಮೌಲ್ಯ ಅಂದಾಜಿನ ಪ್ರಕಾರ 177 ತಾಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 46,324 ಕೋಟಿ ರೂ. ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹೀಗಾಗಿ NDRF ಅಡಿಯಲ್ಲಿ 177 ತಾಲೂಕುಗಳಿಗೆ 7,142.64 ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಉಳಿದ 40 ತಾಲೂಕುಗಳಲ್ಲಿನ ಬೆಳೆ ನಷ್ಟದ ಮೌಲ್ಯಮಾಪನ ಪೂರ್ಣಗೊಂಡ ಬಳಿಕ, ಆ ನಷ್ಟವನ್ನೂ ಪರಿಗಣಿಸಿ ಹೆಚ್ಚುವರಿ ನೆರವು ನೀಡುವಂತೆ ಕೇಂದ್ರ ತಂಡಕ್ಕೆ ಮನವಿ ಮಾಡಲಾಗಿದೆ.
ಸಂಪೂರ್ಣ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಒಟ್ಟು ಸುಮಾರು 55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.


