– ಸಿಸಿಟಿವಿಯಲ್ಲಿ ಕಾನ್ಸ್‌ಟೇಬಲ್ ದರ್ಪ ಮೆರೆದ ವಿಡಿಯೋ ಸೆರೆ
ಹಾಸನ: ಹಣಕಾಸು ವಿಷಯಕ್ಕೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಮಹಿಳಾ ಪೇದೆಯೊಬ್ಬರು ಹಲ್ಲೆ ನಡೆಸಿದ ಘಟನೆ ಬೇಲೂರು (Beluru) ಪಟ್ಟಣದಲ್ಲಿ ನಡೆದಿದೆ.
ಬೇಲೂರು ತಾಲೂಕಿನ, ಕಬ್ಬಿನಮನೆ ಗ್ರಾಮದ ಪ್ರಕಾಶ್ ಎಂಬುವವರ ಮೇಲೆ ಗೋವಿನಹಳ್ಳಿ ಮೂರ್ತಿ ಕೆರಲೂರು ಗ್ರಾಮದ ಪರಮೇಶ ಎಂಬುವವರು 7-4-2025 ರಂದು ಹಲ್ಲೆ ಮಾಡಿ ಹಾಗೂ ಜೀವ ಬೆದರಿಕೆ ಹಾಕಿದ್ದರು. 8-4-2025 ರಂದು ಪ್ರಕಾಶ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ದೂರು ಪಡೆಯದೆ ಪೊಲೀಸ್ ಠಾಣೆಯೊಳಗೆ ಗಂಟೆಗಟ್ಟಲೆ ಪೊಲೀಸರು ಕೂರಿಸಿದ್ದರು. ದೂರು ತೆಗೆದುಕೊಂಡು ಎಫ್‌ಐಆರ್ ದಾಖಲು ಮಾಡಿ ಎಂದು ಪ್ರಕಾಶ್ ಹೇಳಿದ ವೇಳೆ ಮಹಿಳಾ ಕಾನ್ಸ್‌ಟೇಬಲ್ ಲಾವಣ್ಯ ಲಾಠಿಯಿಂದ ಪ್ರಕಾಶ್ ಅವರ ಮೇಲೆ ಹಲ್ಲೆ ಮಾಡಿದ್ದು, ಪ್ರಕಾಶ ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ SIR; ಇದುವರೆಗೆ 7.31 ಲಕ್ಷ ಮತದಾರರಿಗೆ ನೋಟಿಸ್ ವಿತರಣೆ
ಠಾಣೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಆರೈಕೆ ಮಾಡದೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ. ಅರ್ಧ ಗಂಟೆಗು ಹೆಚ್ಚು ಕಾಲ ಪೊಲೀಸ್ ಠಾಣೆಯೊಳಗೆ ಬಿದ್ದಿದ್ದ ಅವರನ್ನು ಮನೆಗೆ ಕಳುಹಿಸಿದ್ದರು. ಈ ಬಗ್ಗೆ ಐದು ಬಾರಿ ಹಿಂದಿನ ಎಸ್ಪಿ ಮಹಮದ್ ಸುಜೇತಾ ಅವರನ್ನು ಭೇಟಿ ಮಾಡಿ ಪೊಲೀಸರಿಂದ ತನಗಾಗಿರುವ ಅನ್ಯಾಯದ ವಿರುದ್ಧ ದೂರು ನೀಡಿದ್ದರು. ಎಫ್‌ಐಆರ್ ದಾಖಲು ಮಾಡದೇ ಇರುವುದರಿಂದ ರೊಚ್ಚಿಗೆದ್ದ ಪ್ರಕಾಶ ಪೊಲೀಸರ ವಿರುದ್ಧ ಹೋರಾಟ ಆರಂಭಿಸಿದ್ದರು.
ಪೊಲೀಸ್ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಆರ್‌ಟಿಐನಡಿ ಸಿಪಿಐ ರೇವಣ್ಣ ಅವರನ್ನು ಕೇಳಿದ್ದರು. ಆದರೆ ಪೊಲೀಸರು ಸಿಸಿಟಿವಿ ದೃಶ್ಯ ನೀಡಿರಲಿಲ್ಲ. ನಂತರ ಪೊಲೀಸ್ ದೂರು ಪ್ರಾಧಿಕಾರದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ಪೊಲೀಸರು ಕ್ಯಾರೆ ಎಂದಿರಲಿಲ್ಲ. ನಂತರ ಪ್ರಕಾಶ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್ ಆದೇಶ ನೀಡಿದ ನಂತರ ಬೇಲೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿ ನೀಡಿದ್ದು, ಸಿಸಿಟಿವಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್ ಹಲ್ಲೆ ಮಾಡುವ ದೃಶ್ಯ ಹಾಗೂ ಪ್ರಕಾಶ ಕುಸಿದು ಬಿದ್ದಿರುವ ದೃಶ್ಯ ಸೆರೆಯಾಗಿದೆ.
ಪ್ರಕರಣ ದಾಖಲಿಸಲು ಪೊಲೀಸರು ಲಂಚ ಕೇಳಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಕೊರತೆ; ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ
