ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ಪ್ರಮುಖ ಆರೋಪಿ ಮಧ್ಯವರ್ತಿ ಬಸವರಾಜ್ ಕನ್ನಾಳೆ(Basavaraj Kannale) ಬರೆದಿಟ್ಟಿದ್ದ ರಹಸ್ಯ ಡೈರಿಯ ಹಾಳೆಗಳು ತನಿಖಾಧಿಕಾರಿಗಳ ಕೈಸೇರಿದ್ದು, ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿಗೆ ನಡೆದಿರುವ ಭಾರೀ ಡೀಲ್ನ ವಿವರಗಳು ಬಯಲಾಗಿವೆ.
ಡೈರಿಯಲ್ಲಿ ಏನು ಸಿಕ್ಕಿದೆ?
ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಈ ಲೆಕ್ಕದ ಹಾಳೆ ಸಿಕ್ಕಿದೆ. ಆತ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಟ್ಟಿ, ಪಾವತಿಯಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಲಸಂಪನ್ಮೂಲ ಇಲಾಖೆಯ ಉಲ್ಲೇಖದೊಂದಿಗೆ ಲೆಕ್ಕ ಇಟ್ಟುಕೊಂಡಿದ್ದ.
ಆತನ ಡೈರಿಯಲ್ಲಿ ‘ಬರಬೇಕಾಗಿರುವುದು’ ಎಂದು ಸ್ಪಷ್ಟವಾಗಿ ಕನ್ನಡದಲ್ಲೇ ಬರೆದುಕೊಂಡು, ಅಭ್ಯರ್ಥಿಗಳಿಂದ ಇನ್ನೂ ಬರಬೇಕಿದ್ದ ಲಕ್ಷಾಂತರ ರೂಪಾಯಿ ಬಾಕಿ ಹಣದ ಪಟ್ಟಿಯನ್ನು ದಾಖಲಿಸಿದ್ದಾನೆ. ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಅಕ್ರಮವಾಗಿ ತರಬೇತಿ ನೀಡಲು ಈತ ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ವಿಚಾರವೂ ತಿಳಿದುಬಂದಿದೆ. ಇದನ್ನೂ ಓದಿ: ದರ್ಶನ್ಗೆ ಶಾಕ್ ಮೇಲೆ ಶಾಕ್ – ಪ್ರದೋಷ್ ಮಾಫಿ ಸಾಕ್ಷಿ ದಾಖಲು ಮುಂದೂಡಲು ಸಲ್ಲಿಸಿದ್ದ ಅರ್ಜಿ ವಜಾ
ಡೈರಿಯಲ್ಲಿದ್ದ ಬಾಕಿ ಹಣದ ಪಟ್ಟಿ:
1. ಗೋವಿಂದ – 5,00,000 ರೂ.
2. ಹರೀಶ್ – 10,00,000 ರೂ.
3. ಪದ್ಮಾವತಿ – 10,00,000 ರೂ.
4. ಮಂಜುನಾಥ್ – 10,00,000 ರೂ.
5. ಪೂಜಾ – 10,00,000 ರೂ.
6. ಅಶ್ವಿನಿ ಕುಮಾರ್ – 10,00,000 ರೂ.
7. ಮೋಹನ್ ಕುಮಾರ್ – 5,00,000 ರೂ.
8. ಸಂಗಮೇಶ್ – 10,00,000 ರೂ.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಡೀಲ್
ಡೈರಿಯಲ್ಲಿ ಉಲ್ಲೇಖವಾಗಿರುವ ಪಶುವೈದ್ಯಾಧಿಕಾರಿಗಳ ಎಲಿಜಿಬಿಲಿಟಿ ಲಿಸ್ಟ್ನಲ್ಲಿದ್ದ ಇಬ್ಬರು ಅಭ್ಯರ್ಥಿಗಳ ಹೆಸರು ಹಾಗೂ ರಿಜಿಸ್ಟ್ರೇಷನ್ ನಂಬರ್ ಕೆಪಿಎಸ್ಸಿ ಬಿಡುಗಡೆ ಮಾಡಿದ್ದ ಅಧಿಕೃತ ಅರ್ಹತಾ ಪಟ್ಟಿಗೆ ನಿಖರವಾಗಿ ಹೋಲಿಕೆಯಾಗುತ್ತಿದೆ. ಒಟ್ಟು 600 ಅಭ್ಯರ್ಥಿಗಳಿದ್ದ ಎಲಿಜಿಬಿಲಿಟಿ ಲಿಸ್ಟ್ನಲ್ಲಿ ಗಾಳ ಹಾಕಿ, ಅಂತಿಮ 329 ಮಂದಿಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತೇ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಕನ್ನಾಳೆ ಡೈರಿಯಲ್ಲಿದ್ದ ಇಬ್ಬರು ಅಭ್ಯರ್ಥಿಗಳು ಎಲಿಜಿಬಿಲಿಟಿ ಲಿಸ್ಟ್ನಲ್ಲಿದ್ದರೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಅವರು ಹಣ ನೀಡಲಿಲ್ಲವೇ ಅಥವಾ ಹಣ ಪಡೆದು ಕನ್ನಾಳೆ ಕೈಕೊಟ್ಟನೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಸದ್ಯ ಈ ಡೈರಿ ಆಧರಿಸಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

