ಕನ್ನಡಿಗರ ಎದೆಯಾಳದಲ್ಲಿ ಸುಮಧುರ ನಾದತರಂಗಗಳನ್ನು ಹೊಮ್ಮಿಸುತ್ತಾ, ಪ್ರತಿಯೊಬ್ಬರ ಮನೆ-ಮನಗಳನ್ನು ಇಂಪಾದ ಗೀತೆಗಳಿಂದ ರಂಜಿಸುತ್ತಾ ಬಂದಿರುವ ಹೆಮ್ಮೆಯ ಪಬ್ಲಿಕ್ ಮ್ಯೂಸಿಕ್(PUBLiC Music) ವಾಹಿನಿ ಇದೀಗ ಯಶಸ್ವಿ 12ನೇ ವರ್ಷಕ್ಕೆ ಕಾಲಿಟ್ಟಿದೆ.
ಈ ಸಂಭ್ರಮದ ಮೈಲಿಗಲ್ಲಿನ ನೆನಪಿಗಾಗಿ, ಭಾರತೀಯ ಸಂಗೀತ ಲೋಕದ ಗಾನಕೋಗಿಲೆ ಡಾ. ಎಸ್. ಜಾನಕಿ(S Janaki) ಅವರಿಗೆ ಭಾವಪೂರ್ಣ‘ಸ್ವರಾಭಿಷೇಕ’ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಈ ಐತಿಹಾಸಿಕ ಸಂಭ್ರಮವನ್ನು ವೀಕ್ಷಕರಿಗೆ ಉಣಬಡಿಸಲು ಇದೇ ಇಂದು ಪಬ್ಲಿಕ್ ಮ್ಯೂಸಿಕ್ನಲ್ಲಿ ದಿನಪೂರ್ತಿ ವರ್ಣರಂಜಿತ ಹಾಗೂ ನಾದಮಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಬೆಳಗ್ಗೆ 8:00 – ಆನಿವರ್ಸರಿ ಸ್ಪೆಷಲ್ ಲೈವ್ ಶೋ:
ದಿನದ ಆರಂಭವೇ ಅತ್ಯಂತ ಲವಲವಿಕೆಯಿಂದ ಕೂಡಿರಲಿದೆ. ಕಳೆದ 12 ವರ್ಷಗಳ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ, ವೀಕ್ಷಕರೊಂದಿಗೆ ನೇರ ಫೋನ್-ಇನ್ ಮಾತುಕತೆ, ಹಿತೈಷಿಗಳ ಶುಭಹಾರೈಕೆ ಹಾಗೂ ಅಭಿಮಾನಿಗಳ ಪ್ರೀತಿಯ ಅನಾವರಣ ಈ ಲೈವ್ ಶೋನಲ್ಲಿ ನಡೆಯಲಿದೆ.
ಬೆಳಗ್ಗೆ 10:00 – ಉದ್ಘಾಟನೆ
12ನೇ ವರ್ಷದ ವಾರ್ಷಿಕೋತ್ಸವದ ಶುಭಾರಂಭ ಸಮಾರಂಭಕ್ಕೆ ಚಂದನವನದ ಜನಪ್ರಿಯ ನಟ ‘ಕೃಷ್ಣ’ ಅಜಯ್ ರಾವ್ ಮೆರುಗು ನೀಡಲಿದ್ದಾರೆ. ಜೊತೆಗೆ ಆಡಿಯೋ ಲೋಕದ ದಿಗ್ಗಜರಾದ ಲಹರಿ ಸಂಸ್ಥೆಯ ವೇಲು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ಜಂಕಾರ್ ಮ್ಯೂಸಿಕ್ನ ಭರತ್ ಜೈನ್ ಹಾಗೂ ಅಶ್ವಿನಿ ಆಡಿಯೋದ ಅಶ್ವಿನಿ ರಾಮ್ಪ್ರಸಾದ್ ಪಾಲ್ಗೊಂಡು ಕಾರ್ಯಕ್ರಮವನ್ನು ಕಳೆಗಟ್ಟಿಸಲಿದ್ದಾರೆ.
ಬೆಳಗ್ಗೆ 11:00 – ಎಸ್. ಜಾನಕಮ್ಮನಿಗೆ ನಾದನಮನ:
ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿ ಜಾನಕಮ್ಮನವರ ಅಮರ ಗೀತೆಗಳಿಗೆ ಭಾವಪೂರ್ಣ ನಮನ ಸಲ್ಲಿಸಲು ‘ಸ್ವರಾಭಿಷೇಕ’ ಸಂಗೀತ ಆಯೋಜಿಸಲಾಗಿದೆ. ಖ್ಯಾತ ಗಾಯಕರಾದ ಅನುರಾಧ ಭಟ್, ಕಂಬದ ರಂಗಯ್ಯ ಹಾಗೂ ಅಂಕಿತ ಕುಂಡು ಅವರು ಜಾನಕಮ್ಮನವರ ಕಂಠಸಿರಿಯಲ್ಲಿ ಮೂಡಿಬಂದ ಎವರ್ಗ್ರೀನ್ ಹಾಡುಗಳನ್ನು ಹಾಡಿ ರಂಜಿಸಿದ್ದಾರೆ.
ಚಂದನವನದ ಹಿರಿಯ ನಟಿಯರಾದ ಡಾ. ಭಾರತಿ ವಿಷ್ಣುವರ್ಧನ್ ಮತ್ತು ಡಾ. ಜಯಮಾಲಾ ಅವರು ಅತಿಥಿಗಳಾಗಿ ಭಾಗವಹಿಸಿ ಜಾನಕಮ್ಮನವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಅದ್ಭುತ ಸಂಗೀತ ರಸದೌತಣ ಬೆಳಗ್ಗೆ 11ಕ್ಕೆ ಪ್ರಸಾರವಾಗಲಿದೆ.
ದಿನಪೂರ್ತಿ – ನಿರಂತರ ಸಂಗೀತ ರಸಮಂಜರಿ:
‘ಸ್ವರಾಭಿಷೇಕ’ದ ನಂತರವೂ ದಿನವಿಡೀ ಲೈವ್ ಶೋಗಳು, ವಿಶೇಷ ಮನರಂಜನಾ ಕಾರ್ಯಕ್ರಮಗಳು ಹಾಗೂ ಎಸ್. ಜಾನಕಿಯವರ ಸೂಪರ್ಹಿಟ್ ಹಾಡುಗಳ ಸರಣಿ ವೀಕ್ಷಕರನ್ನು ತಣಿಸಲಿದೆ.

