– ಗುಟ್ಟಾಗಿ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಅಂತಾ ಸ್ಪಷ್ಟನೆ
– ಅಭಿನಂದಿಸಲು ಸಿಎಂ ಕಚೇರಿಯಲ್ಲೇ ಶಾಲು, ಹೂಗುಚ್ಛ ಕೊಟ್ರು
ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ. ಲಿಖಿತ ರೂಪದ ಆದೇಶ ಬೇಕು ಅನ್ನೋದು ನಮ್ಮ ಬೇಡಿಕೆಯಾಗಿತ್ತು. ಲಿಖಿತ ಆದೇಶ ಬರೋವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಆಶಾ ಕಾರ್ಯಕರ್ತೆಯರ ಸಂಘಟನಾ ಕಾರ್ಯದರ್ಶಿ ನಾಗಲಕ್ಷ್ಮಿ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹2,000 ಹೆಚ್ಚಳ
ಆಶಾ ಸಹೋದರಿಯರು ನಮ್ಮ ರಾಜ್ಯದ ಆಸ್ತಿ. ಅವರೆಲ್ಲರೂ ಹಳ್ಳಿ ಹಾಗೂ ನಗರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಆರೋಗ್ಯ ಕ್ಷೇತ್ರದ ಪ್ರಗತಿಗೆ ಆಶಾ ಕಾರ್ಯಕರ್ತೆಯರ ಸೇವೆ ಮುಂದುವರಿಯಲಿದೆ. https://t.co/BkhcvF4DV6
— DK Shivakumar (@DKShivakumar) November 28, 2026
ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಲಿಖಿತ ರೂಪದಲ್ಲಿ ಆದೇಶ ಬೇಕು ಅನ್ನೋದೂ ಬೇಡಿಕೆ ಆಗಿತ್ತು. ಮುಖ್ಯಮಂತ್ರಿಗಳು ನನ್ನ ಮಾತೇ ಲಿಖಿತ ಎಂದಿದ್ದಾರೆ. ಆದ್ರೆ ಆಶಾ ಕಾರ್ಯಕರ್ತೆಯರು ಲಿಖಿತ ರೂಪದ ಆದೇಶ ಬೇಕು ಅಂದಿದ್ದಾರೆ. ಆದೇಶ ಪ್ರತಿ ಬರೋವರೆಗೆ ನಮ್ಮ ಆಹೋರಾತ್ರಿ ಧರಣಿ ಮುಂದುವರಿಯುತ್ತೆ ಎಂದಿದ್ದಾರೆ.
ಸಿಎಂ ಕಚೇರಿಯಲ್ಲೇ ಶಾಲು, ಹೂಗುಚ್ಛ ಕೊಟ್ರು
ಇನ್ನೂ ಸಿಎಂಗೆ ಶಾಲು ಹಾಕಿ ಸನ್ಮಾನಿಸಿದ್ದರ ನಗ್ಗೆ ಕೆಲವರು ತಪ್ಪಾಗಿ ಅರ್ಥ ಕಲ್ಪಿಸುತ್ತಿದ್ದಾರೆ. ಶಾಲು ಹಾಕಿರೋದು ನಾವೆಲ್ಲ, ನಾವು ಶಾಲು, ಹೂಗುಚ್ಛ ತೆಗೆದುಕೊಂಡು ಹೋಗಿರಲಿಲ್ಲ. ಸಿಎಂ ಕಚೇರಿಯಲ್ಲೇ ಕೊಟ್ಟರು. ಇದರ ಬಗ್ಗೆ ತಪ್ಪು ಸಂದೇಶ ಹೋಗಬಾರದು. ನಾವು ಸಿಎಂ ಭರವಸೆಗೆ ಧನ್ಯವಾದ ಸಲ್ಲಿಸಿದ್ದೇವೆ ಅಷ್ಟೇ. ಗುಟ್ಟಾಗಿ ಯಾವುದು ಮಾಡೋ ಅವಶ್ಯಕತೆ ಇಲ್ಲ. ನಾವು ತಪ್ಪು ಮಾಡಿದ್ರೆ ನಾಡಿನ ಜನತೆಗೆ ಕ್ಷಮೆ ಕೇಳೋಕೆ ಹಿಂಜರಿಯಲ್ಲ ಅಂತಾ ಹೇಳಿದ್ದಾರೆ.
ಏನಾಗಿದ್ರೂ ತಪ್ಪಾಗಿದ್ರೆ ಸಾಕ್ಷಿ ಸಮೇತ ತಂದು ಕೊಡಿ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗಾಗಿ ಬಳಸಬೇಡಿ. ನಮ್ಮ ಬೇಡಿಕೆಗಳು ಸ್ಪಷ್ಟ, ಲಿಖಿತ ರೂಪದ ಆದೇಶ ಕೈ ಸೇರೋ ತನಕ ಹಿಂದೆ ಸರಿಯಲ್ಲ. ಹೋರಾಟದಲ್ಲಿ ಆಶಾ ಸಹೋದರಿಯರು ಇರೋ ತನಕ ನಾವು ಜೊತೆ ಇರುತ್ತೇವೆ. ಜೀವ ಹೋದ್ರೂ ಪರ್ವಾಗಿಲ್ಲ ಅಂದಿದ್ದಾರೆ.
