– ವಿಶ್ವವಿದ್ಯಾಲಯಗಳಿಗೆ 1 ಸಾವಿರ ಉಪನ್ಯಾಸಕರು, 2 ಸಾವಿರ ಪ್ರಾಧ್ಯಾಪಕರ ಭರ್ತಿಗೆ ಕ್ರಮ
ಗದಗ: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರ್ಕಾರಿ ಪದವಿ ಕಾಲೇಜುಗಳಿಗೆ ಶೀಘ್ರದಲ್ಲೇ ಖಾಯಂ ಪ್ರಾಚಾರ್ಯರನ್ನು ನೇಮಕ ಮಾಡಲಾಗುವುದು. ಇದರೊಂದಿಗೆ 2 ಸಾವಿರ ಪ್ರಾಧ್ಯಾಪಕರು ಹಾಗೂ ವಿಶ್ವವಿದ್ಯಾಲಯಗಳಿಗೆ 1 ಸಾವಿರ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ (Basvaraj Rayareddi) ಹೇಳಿದರು.
ಜಿಲ್ಲೆಯ ಮುಂಡರಗಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಾಡೋಜ ಜ. ಅನ್ನದಾನೀಶ್ವರ ಶ್ರೀಗಳಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ನೀಡಿದಷ್ಟೇ ಕೊಡುಗೆಯನ್ನು ಮಠಮಾನ್ಯಗಳೂ ನೀಡಿವೆ. ಇದರಿಂದಾಗಿ ಕರ್ನಾಟಕದ ಸಾಕ್ಷರತಾ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ವೈದ್ಯರನ್ನು ನಮ್ಮ ರಾಜ್ಯ ತಯಾರು ಮಾಡುತ್ತಿದೆ. ಬೆಂಗಳೂರೊಂದರಲ್ಲೇ 27 ಲಕ್ಷ ಎಂಜಿನಿಯರ್ಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕವು ಭಾರತದ ಪ್ರಮುಖ ಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಸಚಿವರು ಶ್ಲಾಘಿಸಿದರು.
ಮಠಗಳ ಸೇವೆ ಅನನ್ಯ:
ಅನ್ನದಾನೀಶ್ವರ ಶ್ರೀಗಳಿಗೆ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ಶ್ರೀಗಳ ಸೇವಾ ಪರಂಪರೆ, ಸಮಾಜಮುಖಿ ಚಿಂತನೆ ಮತ್ತು ಸಾಂಸ್ಕೃತಿಕ ಕೊಡುಗೆಗೆ ಸಂದ ಗೌರವ ಇದಾಗಿದೆ. ವೀರಶೈವ ಲಿಂಗಾಯತ ಮಠಗಳು ಕೇವಲ ಧಾರ್ಮಿಕ ಬೋಧನೆಗೆ ಸೀಮಿತವಾಗದೆ, ಕಾಯಕ, ದಾಸೋಹ ಹಾಗೂ ಶಿಕ್ಷಣದ ಮೂಲಕ ಬಡ ಮತ್ತು ಮಧ್ಯಮ ವರ್ಗದವರಿಗೆ ಆಸರೆಯಾಗಿವೆ ಎಂದು ಬಣ್ಣಿಸಿದರು. ಅನ್ನದಾನೀಶ್ವರ ಶ್ರೀಗಳ ಕಾಲೇಜು ಕಟ್ಟಡಕ್ಕೆ 2 ಕೋಟಿ ರೂ. ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ದುರುಗೇಶ ಕೆ.ಆರ್., ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ, ಅನ್ನದಾನೀಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬಿ.ಜಿ. ಜವಳಿ, ರುದ್ರಗೌಡ ಪಾಟೀಲ, ಡಿ.ಡಿ. ಮೋರನಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
