ಬಳ್ಳಾರಿ: ಗಣೇಶ ವಿಸರ್ಜನಾ ಮೆರವಣಿಗೆ(Ganesha Procession) ವೇಳೆ ಉಂಟಾಗಿದ್ದ ಗೊಂದಲ ಮತ್ತು ಬಿಗುವಿನ ವಾತಾವರಣಕ್ಕೆ ಕೊನೆಗೂ ಭಾವೈಕ್ಯತೆಯ ಸ್ಪರ್ಶದೊಂದಿಗೆ ತೆರೆಬಿದ್ದಿದೆ.
ಹೂವಿನಹಡಗಲಿ ಪಟ್ಟಣದ ಕೊರವರ ಓಣಿಯಲ್ಲಿ ಮರುಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗೆ ಇಸ್ಲಾಂಪೇಟೆಯ ಮುಸ್ಲಿಂ(Muslim) ಬಾಂಧವರು ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಮತ್ತು ಕೋಮು ಸಾಮರಸ್ಯದ ಅಪರೂಪದ ಸಂದೇಶ ಸಾರಿದ್ದಾರೆ.
ಸೆಪ್ಟೆಂಬರ್ 18ರಂದು ಕೊರವರ ಓಣಿಯ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಇಸ್ಲಾಂಪೇಟೆ ಮಾರ್ಗವಾಗಿ ಸಾಗುತ್ತಿದ್ದಾಗ, ಮುಸ್ಲಿಂ ಸಮುದಾಯದ ಕೆಲ ಯುವಕರು ಹಾಗೂ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿ ಮೆರವಣಿಗೆಯನ್ನು ತಡೆದಿದ್ದರು. ಯಾವುದೇ ಕಾರಣಕ್ಕೂ ಈ ರಸ್ತೆಯಲ್ಲಿ ಮೆರವಣಿಗೆ ಸಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ವಿಸರ್ಜನೆಗೆ ಇಸ್ಲಾಂಪೇಟೆಯಲ್ಲಿ ಅಡ್ಡಿ – ಮತ್ತೆ ಕೊರವರ ಓಣಿಯಲ್ಲಿ ಗಣೇಶ ಪ್ರತಿಷ್ಠಾಪನೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಾಸಕ ಕೃಷ್ಣಾ ನಾಯಕ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಮೆರವಣಿಗೆ ತಡೆದ ಧೋರಣೆಯನ್ನು ಖಂಡಿಸಿ, ಗಣೇಶ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳು ಹಾಗೂ ಶಾಸಕ ಕೃಷ್ಣಾನಾಯಕ್ ಅವರು ವಿಸರ್ಜನೆಗೆ ಹೊರಟಿದ್ದ ಗಣೇಶ ಮೂರ್ತಿಯನ್ನು ಮತ್ತೆ ತಂದು ಕೊರವರ ಓಣಿಯ ಮೂಲ ಜಾಗದಲ್ಲೇ ಮರುಪ್ರತಿಷ್ಠಾಪನೆ ಮಾಡಿದ್ದರು.
ಘಟನೆಯ ಬೆನ್ನಲ್ಲೇ ಪರಿಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಎರಡೂ ಸಮುದಾಯಗಳ ಪ್ರಮುಖರೊಂದಿಗೆ ಶಾಂತಿ ಸಭೆ ನಡೆಸಿತು. ಈ ಸಭೆಯ ಫಲವಾಗಿ ತಪ್ಪು ಕಲ್ಪನೆಗಳು ದೂರವಾಗಿ, ಇಸ್ಲಾಂಪೇಟೆಯ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು ಸ್ವತಃ ಕೊರವರ ಓಣಿಗೆ ಆಗಮಿಸಿ ಮರುಪ್ರತಿಷ್ಠಾಪಿತ ಗಣಪತಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಈ ಮೂಲಕ ಹಿಂದಿನ ಕಹಿ ಘಟನೆಯನ್ನು ಮರೆತು, ಪರಸ್ಪರ ಸಹಬಾಳ್ವೆಯ ಹಾದಿ ಹಿಡಿಯುವ ಮೂಲಕ ಇಡೀ ಪಟ್ಟಣದಲ್ಲಿ ಶಾಂತಿ-ಸೌಹಾರ್ದತೆಯ ವಾತಾವರಣ ಮರುಸ್ಥಾಪನೆಯಾಗಿದೆ.

