ದೆಹಲಿ ಹೈಕೋರ್ಟ್ ನಟಿ ಜಾನ್ವಿ ಕಪೂರ್ (Janhvi Kapoor) ಅವರ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಅಶ್ಲೀಲ ಮತ್ತು ಪೋರ್ನೋಗ್ರಾಫಿಕ್ ಕಂಟೆಂಟ್ ವಿರುದ್ಧ ಮಧ್ಯಂತರ ರಕ್ಷಣೆ ನೀಡಿದೆ.
ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರಿದ್ದ ಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸಿ, ಕಾನೂನುಬಾಹಿರ ಸ್ವರೂಪದ ಕೆಲವು ಆನ್‌ಲೈನ್ ಕಂಟೆಂಟ್‌ಗಳನ್ನು (Online content) ತೆಗೆದುಹಾಕುವಂತೆ ನಿರ್ದೇಶನ ನೀಡಿತು. ಆದರೆ ಜಾನ್ವಿ ಅವರು ಕೋರಿದ್ದ ವ್ಯಾಪಕ ಪರಿಹಾರಗಳನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿತು.

ಕಪೂರ್ ಅವರು 5,000 ಕ್ಕೂ ಹೆಚ್ಚು ವೆಬ್‌ಪುಟಗಳು (WEB Pages) ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಇದರಲ್ಲಿ ಎಐ ಮೂಲಕ ಸೃಷ್ಟಿಸಲಾದ ಅಶ್ಲೀಲ ಕಂಟೆಂಟ್, ನಕಲಿ ಖಾತೆಗಳು, ಫೇಕ್ ಬುಕಿಂಗ್ ಏಜೆನ್ಸಿಗಳು ಹಾಗೂ ಅವರ ಹೆಸರು, ಚಿತ್ರ ಮತ್ತು ವ್ಯಕ್ತಿತ್ವದ ಇತರ ಅಂಶಗಳನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಚಾಟ್‌ಬಾಟ್‌ಗಳು ಸೇರಿದ್ದವು. ಈ ಪೈಕಿ ಸ್ಪಷ್ಟವಾಗಿ ಅಶ್ಲೀಲ, ಅಸಭ್ಯ ಮತ್ತು ಲೈಂಗಿಕ ಸ್ವರೂಪದ ಕಂಟೆಂಟ್‌ಗಳನ್ನ ಪ್ರತ್ಯೇಕವಾಗಿ ಗುರುತಿಸಿ ಪಟ್ಟಿಯ ರೂಪದಲ್ಲಿ ಸಲ್ಲಿಸುವಂತೆ ನ್ಯಾಯಾಲಯ ಕಪೂರ್ ಅವರ ವಕೀಲರಿಗೆ ಸೂಚಿಸಿದೆ. ಆದರೆ ಫ್ಯಾನ್ ಪೇಜ್‌ಗಳ ವಿರುದ್ಧ ವ್ಯಾಪಕ ನಿರ್ಬಂಧ ವಿಧಿಸುವ ಮನವಿಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸೆಲೆಬ್ರಿಟಿಯ ಹೆಸರು ಅಥವಾ ಚಿತ್ರವನ್ನ ಬಳಸಿದ ಪ್ರತಿಯೊಂದು ಸಂದರ್ಭವೂ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಮೂರ್ತಿ ಭಂಭಾನಿ ಹೇಳಿದ್ದಾರೆ. ಅಭಿಮಾನಿಗಳ ಪುಟಗಳು ನಟಿಯ ಕೆಲಸವನ್ನು ಹೊಗಳಬಹುದು, ಟೀಕಿಸಬಹುದು ಅಥವಾ ವ್ಯಂಗ್ಯವಾಡಬಹುದು. ಇಂತಹ ಅಭಿವ್ಯಕ್ತಿಯನ್ನು ವ್ಯಕ್ತಿತ್ವ ಹಕ್ಕುಗಳ ಹೆಸರಿನಲ್ಲಿ ಸಂಪೂರ್ಣವಾಗಿ ನಿರ್ಬಂಧಿಸುವುದು ವಾಕ್‌ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.

