– ಪತಿ ಸಮರ್ಥ್ ಸಿಂಗ್, ಅತ್ತೆ ಗಿರಿಬಾಲಾ ಸಿಬಿಐ ಕಸ್ಟಡಿಗೆ
ಭೋಪಾಲ್: ನಟಿ ಹಾಗೂ ಮಾಡೆಲ್ ತ್ವಿಶಾ ಶರ್ಮಾ (Twisha Sharma) ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ತ್ವಿಶಾ ಹೊಂದಿದ್ದ 20 ಲಕ್ಷ ರೂ. ಮೌಲ್ಯದ ಷೇರುಗಳ ವಿಚಾರವೇ ಕುಟುಂಬದ ಒಳಜಗಳಕ್ಕೆ ಕಾರಣವಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ.
ಮದುವೆಯಾದ ಬಳಿಕ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ನಿವೃತ್ತ ನ್ಯಾ. ಗಿರಿಬಾಲಾ ಸಿಂಗ್ (Giribala Singh) ಅವರು ತ್ವಿಶಾ ಹೆಸರಿನಲ್ಲಿದ್ದ ಷೇರುಗಳನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದರು ಎಂದು ಕುಟುಂಬಸ್ಥರು ಈ ಹಿಂದೆಯೇ ಆರೋಪಿಸಿದ್ದರು. ಈ ಹಣಕಾಸಿನ ವಿಚಾರವೇ ಮನೆಯಲ್ಲಿ ಜಗಳ ಮತ್ತು ಕಿರುಕುಳಕ್ಕೆ ಕಾರಣವಾಗಿತ್ತಾ ಎಂಬುದನ್ನು ಇದೀಗ ಸಿಬಿಐ ತನಿಖೆ ಮಾಡುತ್ತಿದೆ. ಇದನ್ನೂ ಓದಿ: ತ್ವಿಶಾ ಶರ್ಮಾ ಆತ್ಮಹತ್ಯೆ ಕೇಸ್: 10 ದಿನಗಳ ಬಳಿಕ ಕೊನೆಗೂ ಪೊಲೀಸ್ ವಶಕ್ಕೆ ಪತಿ

ಇದರ ಜೊತೆಗೆ ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ ಹಾಗೂ ಅನುಮಾನಗಳ ಆರೋಪವೂ ಕೇಳಿಬಂದಿದೆ. ತ್ವಿಶಾ ಗರ್ಭಿಣಿಯಾಗಿದ್ದ ವೇಳೆ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಕೇಳಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೇ 12ರಂದು ಭೋಪಾಲ್‌ನ ಕಟಾರಾ ಹಿಲ್ಸ್ನಲ್ಲಿರುವ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ತ್ವಿಶಾ ಕುಟುಂಬ ಪತಿ ಹಾಗೂ ಅತ್ತೆ ವಿರುದ್ಧ ಗಂಭೀರ ಆರೋಪ ಮಾಡಿತ್ತು.
ಈ ಪ್ರಕರಣವನ್ನು ಮಧ್ಯಪ್ರದೇಶ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ. ತನಿಖೆ ನಡೆಸಿದ ಸಿಬಿಐ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಸತತ 10 ಗಂಟೆಗಳ ವಿಚಾರಣೆ ಬಳಿಕ ಬಂಧಿಸಿದೆ. ಸಮರ್ಥ್ ಸಿಂಗ್ ಈಗಾಗಲೇ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಶುಕ್ರವಾರ ಇಬ್ಬರನ್ನೂ ಭೋಪಾಲ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 5 ದಿನಗಳ ವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಸಿಬಿಐ ಈಗ ತ್ವಿಶಾ ಸಾವಿಗೂ ಮುನ್ನ ಕೊನೆಯ 40 ನಿಮಿಷಗಳ ಬಗ್ಗೆ ವಿಶೇಷ ಗಮನ ಹರಿಸಿದೆ. ಮನೆದಲ್ಲಿದ್ದ ಸಿಸಿಟಿವಿ ದೃಶ್ಯಗಳು, ಮೊಬೈಲ್ ಕಾಲ್ ಡೀಟೇಲ್ಸ್, ವೈಫೈ ಲಾಗ್, ಇಂಟರ್‌ನೆಟ್ ಬಳಕೆ ಸೇರಿದಂತೆ ಎಲ್ಲಾ ಡಿಜಿಟಲ್ ಸಾಕ್ಷಿಗಳನ್ನು ಪರಿಶೀಲಿಸಲಾಗುತ್ತಿದೆ.
ತ್ವಿಶಾ ಜಿಮ್ ಏರಿಯಾದ ಕಡೆ ಹೋಗಿದ್ದ ದೃಶ್ಯ ಮಾತ್ರ ಯಾಕೆ ವೈರಲ್ ಆಗಿದೆ? ಉಳಿದ ದೃಶ್ಯಗಳು ಎಲ್ಲಿವೆ? ಸಾಕ್ಷಿ ನಾಶ ಮಾಡುವ ಯತ್ನ ನಡೆದಿತ್ತಾ? ಎಂಬ ಪ್ರಶ್ನೆಗಳು ಮೂಡಿವೆ. ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಸಿಬಿಐ ಕಸ್ಟಡಿಯಲ್ಲಿರುವ ಸಮರ್ಥ್ ಸಿಂಗ್ ಜಪಾನಿನ ‘ಬಟರ್’ ಕಾದಂಬರಿಯನ್ನು ಓದುತ್ತಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕಾದಂಬರಿಯಲ್ಲಿ ಕೊಲೆ ಆರೋಪ ಎದುರಿಸುವ ಮಹಿಳೆ ಕೊನೆಯಲ್ಲಿ ಸಾಕ್ಷಿ ಕೊರತೆಯಿಂದ ಬಿಡುಗಡೆಯಾಗುವ ಕಥೆ ಇದಾಗಿದೆ. ಈ ವಿಚಾರವೂ ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಮೃತ ಮಗಳಿಗಿಂತ ವಿಚ್ಛೇದಿತ ಮಗಳು ಇರೋದೇ ಉತ್ತಮ – ತ್ವಿಶಾ ಕೇಸ್ ಸುಪ್ರೀಂನಲ್ಲಿ ಇಂದು ಏನಾಯ್ತು?
