ಭೋಪಾಲ್: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ (Twisha Sharma Death Case) ಸಂಬಂಧಿಸಿದಂತೆ ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಮೃತಳ ಪತಿ ಸಮರ್ಥ್ ಸಿಂಗ್ (Samarth Singh) ಕೊನೆಗೂ ಪೊಲೀಸ್ ವಶವಾಗಿದ್ದಾನೆ.
ಜಬ್ಬಲ್ಪುರದ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ ಆತನನ್ನು ಪೊಲೀಸರು ಇಂದು ಸಂಜೆ ವಶಕ್ಕೆ ಪಡೆದಿದ್ದಾರೆ. ಗುರುವಾರವಷ್ಟೇ ಭೋಪಾಲ್ ಸೆಷನ್ಸ್ ನ್ಯಾಯಾಲಯವು ಸಮರ್ಥ್ ಸಿಂಗ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತಕ್ಷಣವೇ ಶರಣಾಗುವಂತೆ ಖಡಕ್ ಸೂಚನೆ ನೀಡಿತ್ತು.
33 ವರ್ಷದ ತ್ವಿಶಾ ಶರ್ಮಾ ಮೇ 12ರಂದು ಭೋಪಾಲ್‌ನಲ್ಲಿರುವ (Bhopal) ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮಗಳ ಸಾವಿನಿಂದ ಕಂಗಾಲಾಗಿರುವ ತ್ವಿಶಾ ಕುಟುಂಬಸ್ಥರು, ಇದು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಪತಿ ಮತ್ತು ಅತ್ತೆಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಅತ್ತೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಾ, ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಂಗ್ ಕುಟುಂಬಸ್ಥರು, “ತ್ವಿಶಾ ಮಾದಕ ವ್ಯಸನಕ್ಕೆ (Drug Addiction) ಒಳಗಾಗಿದ್ದಳು, ಅದೇ ಆಕೆಯ ಸಾವಿಗೆ ಕಾರಣ” ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಅನುಮತಿ
ಈ ಸಾವಿನ ಹಿಂದೆ ಹಲವು ಅನುಮಾನಾಸ್ಪದ ಸಂಗತಿಗಳಿವೆ ಎಂದು ತ್ವಿಶಾ ಕುಟುಂಬ ಹಠ ಹಿಡಿದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಹೈಕೋರ್ಟ್ ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆಗೆ (Second Post-Mortem) ಅನುಮತಿ ನೀಡಿದೆ. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅದು ‘ಆತ್ಮಹತ್ಯೆ’ ಎಂದು ಉಲ್ಲೇಖಿಸಲಾಗಿದ್ದರೂ, ಕುಟುಂಬಸ್ಥರು ಅದನ್ನು ಒಪ್ಪಲು ಸಿದ್ಧರಿಲ್ಲ. ಆದರೆ, ತ್ವಿಶಾ ಅತ್ತೆ ಗಿರಿಬಾಲಾ ಸಿಂಗ್ ಪರ ವಕೀಲರು ಈ ಎರಡನೇ ಮರುಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರತಿಷ್ಠಿತ ಸಂಸ್ಥೆಯಾದ ಏಮ್ಸ್ (AIIMS) ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈಗ ಮತ್ತೆ ಮರುಪರೀಕ್ಷೆಗೆ ಕೇಳುವುದು ನಮ್ಮ ವೈದ್ಯಕೀಯ ವ್ಯವಸ್ಥೆಯ ಮೇಲಿನ ಅವಿಶ್ವಾಸವನ್ನು ತೋರಿಸುತ್ತದೆ” ಎಂದು ಅತ್ತೆ ಪರ ವಕೀಲರು ಕೋರ್ಟ್‌ನಲ್ಲಿ ವಾದಿಸಿದರು.
ಸಿಬಿಐ ತನಿಖೆಗೆ ಆದೇಶ
ಪ್ರಕರಣದ ಗಾಂಭೀರತೆಯನ್ನು ಅರಿತ ಮಧ್ಯಪ್ರದೇಶ ಸರ್ಕಾರವು ಇಡೀ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಹಸ್ತಾಂತರಿಸಲು ಆದೇಶಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸಿಬಿಐ ಈ ಸಾವಿನ ರಹಸ್ಯವನ್ನು ಭೇದಿಸಲಿದೆ.
ಮತ್ತೊಂದೆಡೆ, ತ್ವಿಶಾ ನಮ್ಮ ಮನೆಯ ಸೊಸೆ, ಆಕೆಯ ಅಂತ್ಯಸಂಸ್ಕಾರ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಅಂತ್ಯಸಂಸ್ಕಾರ ಪ್ರಕ್ರಿಯೆ ಇನ್ನು ವಿಳಂಬವಾಗಬಾರದು ಎಂದು ಸಿಂಗ್ ಕುಟುಂಬದ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಅತ್ತೆಗೆ ನೋಟಿಸ್
ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ತ್ವಿಶಾ ಅತ್ತೆ ಗಿರಿಬಾಲಾ ಸಿಂಗ್ (63 ವರ್ಷ) ಅವರು ನಿವೃತ್ತ ನ್ಯಾಯಾಧೀಶರಾಗಿದ್ದಾರೆ. ಅವರ ವಯಸ್ಸು ಮತ್ತು ಹಳೆಯ ಹುದ್ದೆಯನ್ನು ಪರಿಗಣಿಸಿ ಮೇ 15 ರಂದು ಭೋಪಾಲ್ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ಆರೋಪಿಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ತ್ವಿಶಾ ತಂದೆ ನವನಿಧಿ ಶರ್ಮಾ ಅವರು ಮಧ್ಯಪ್ರದೇಶ ಹೈಕೋರ್ಟ್‌ನ ಜಬಲ್‌ಪುರ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಈಗ ಗಿರಿಬಾಲಾ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

