ನವದೆಹಲಿ: ನಿವೃತ್ತ ನ್ಯಾಯಾಧೀಶೆ ಸೊಸೆ ತ್ವಿಶಾ ಶರ್ಮಾ (Twisha Sharma) ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಪ್ರಕರಣದ ತನಿಖೆ ನ್ಯಾಯಸಮ್ಮತ, ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಮಹತ್ವದ ಸೂಚನೆ ನೀಡಿದೆ. ಜೊತೆಗೆ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಊಹಾಪೋಹಗಳ ಬಗ್ಗೆ ಕೂಡ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ತ್ವಿಶಾ ಶರ್ಮಾ ಅವರ ಸಾವಿನ ಪ್ರಕರಣದಲ್ಲಿ ಸಂಸ್ಥಾಗತ ಪಕ್ಷಪಾತ, ತನಿಖಾ ಲೋಪ ಹಾಗೂ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (CJI Suryakanth) ನೇತೃತ್ವದ ಪೀಠ ಈ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಎರಡನೇ ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಎರಡೂ ಕಡೆಯವರ ಹೇಳಿಕೆಗಳು ಹರಿದಾಡುತ್ತಿರುವ ಬಗ್ಗೆ ಕೋರ್ಟ್ ಬೇಸರ ವ್ಯಕ್ತಪಡಿಸಿತು. ಕಾನೂನು ಪ್ರಕ್ರಿಯೆಯಂತೆ ತನಿಖೆ ನಡೆಯಲು ಅವಕಾಶ ನೀಡಿ ಎಂದು ಪೀಠ ಹೇಳಿದೆ.
ಆರೋಪಿ ಪರ ವಕೀಲ ಸಿದ್ಧಾರ್ಥ್ ದೇವ್, ಪ್ರಕರಣಕ್ಕೆ ಸಂಬಂಧಿಸಿದ ಸಿಆರ್‌ಪಿಸಿ ಸೆಕ್ಷನ್ 161ರ ಹೇಳಿಕೆಗಳು ಮರುದಿನವೇ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಸರ್ಕಾರದ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಾಜಿ ನ್ಯಾಯಾಧೀಶೆಯಾಗಿರುವ ಆರೋಪಿ ತ್ವಿಶಾ ಅತ್ತೆ ಗಿರಿಬಾಲಾ ಸಿಂಗ್ ಮಾಧ್ಯಮಗಳ ಮುಂದೆ ತ್ವಿಶಾ ಶರ್ಮಾ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಶಿಫಾರಸು ಮಾಡಲಾಗಿದೆ ಎಂದು ಕೂಡ ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಸಿಬಿಐ ಶೀಘ್ರದಲ್ಲೇ ತನಿಖೆ ಕೈಗೆತ್ತಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿತು. ಇದನ್ನೂ ಓದಿ: ಜಿರಳೆ ಪಾರ್ಟಿ ವಿರುದ್ಧ ಸಿಬಿಐ ತನಿಖೆ| ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ – PIL ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ಇದೇ ವೇಳೆ ತುಷಾರ್ ಮೆಹ್ತಾ, ಮೃತ ಮಗಳಿಗಿಂತ ವಿಚ್ಛೇದಿತ ಮಗಳು ಇರೋದೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹೇಳಿಕೆ ನ್ಯಾಯಾಲಯದಲ್ಲಿ ಹೆಚ್ಚಿನ ಗಮನ ಸೆಳೆಯಿತು.
ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪಕ್ಷವೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸಾರ್ವಜನಿಕರು ಕೂಡ ಊಹಾಪೋಹಗಳಿಗೆ ಅವಕಾಶ ನೀಡದೆ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು ಎಂದು ಕೋರ್ಟ್ ತಿಳಿಸಿದೆ. ಕೊನೆಯಲ್ಲಿ, ಪ್ರಕರಣದ ಆರೋಪಗಳ ಸತ್ಯಾಸತ್ಯತೆ ಬಗ್ಗೆ ತಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
