ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ಸಿಬಿಐ (CBI) ತನಿಖೆ ನಡೆಸಬೇಕೆಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟವಾಗಿ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಇಂದು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ವಾದವನ್ನು ಆಲಿಸಿದ ಸಿಜೆಐ, “ಈ ವಿಷಯದಲ್ಲಿ ಯಾವುದೇ ಗಂಭೀರವಾದ ತುರ್ತು ಪರಿಸ್ಥಿತಿ ಇಲ್ಲ. ಇದನ್ನು ಅಷ್ಟೊಂದು ಭಾವನಾತ್ಮಕವಾಗಿ ತೆಗೆದುಕೊಳ್ಳುವ ಅಗತ್ಯವೂ ಇಲ್ಲ” ಎಂದು ತಿಳಿಸಿದರು. ಅಲ್ಲದೆ, ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಯಂತೆ ಸೂಕ್ತ ಸಮಯದಲ್ಲಿ ಈ ಅರ್ಜಿಯ ಪರಿಶೀಲನೆ ನಡೆಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಇದೇ ವೇಳೆ ಕಲಾಪದಲ್ಲಿ ಮಾತನಾಡಿದ ಸಿಜೆಐ ಸೂರ್ಯ ಕಾಂತ್ ಅವರು, ಈ ಹಿಂದೆ ನ್ಯಾಯಾಲಯದಲ್ಲಿ ತಾವಾಡಿದ್ದ ‘ಜಿರಳೆ’ ಎಂಬ ರೂಪಕದ ಹೇಳಿಕೆಯನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ದಾರಿಗೆಳೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪೋಷಕರು ಐಎಎಸ್ ಅಧಿಕಾರಿಗಳಾಗಿದ್ದರೆ ಮಕ್ಕಳಿಗೆ ಮೀಸಲಾತಿ ಯಾಕೆ ಬೇಕು – ಸುಪ್ರೀಂ ಪ್ರಶ್ನೆ

ಅರ್ಜಿಯಲ್ಲಿ ಏನಿತ್ತು?
ವಕೀಲ ರಾಜಾ ಚೌಧರಿ ಅವರು ಸಲ್ಲಿಸಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಇಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ರಹಸ್ಯ ಚಟುವಟಿಕೆಗಳು ಹಾಗೂ ದೇಶಾದ್ಯಂತ ಸಕ್ರಿಯವಾಗಿರುವ ನಕಲಿ ಪದವಿ ಕಾನೂನು ವೃತ್ತಿ ಜಾಲದ ವಿರುದ್ಧ ಸಿಬಿಐ ತನಿಖೆಯಾಗಬೇಕು.
ನ್ಯಾಯಾಲಯದ ನೇರ ಪ್ರಸಾರದ ಆಡಿಯೋ ಮತ್ತು ವಿಡಿಯೋ ತುಣುಕುಗಳನ್ನು ಬೇಕಾಬಿಟ್ಟಿ ಕತ್ತರಿಸಿ, ಮೀಮ್ಸ್ (Memes) ಮಾಡಿ ವಾಣಿಜ್ಯ ಹಾಗೂ ವೈಯಕ್ತಿಕ ಪ್ರಚಾರದ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿರುವುದನ್ನು ತಡೆಯಲು ತಕ್ಷಣವೇ ಕಾನೂನು ರೂಪಿಸಬೇಕು.
