ನವದೆಹಲಿ: ತಂದೆ ಮತ್ತು ತಾಯಿ ಇಬ್ಬರೂ ಐಎಎಸ್ (IAS) ಅಧಿಕಾರಿಗಳಾಗಿದ್ದರೆ, ಅವರ ಮಕ್ಕಳಿಗೆ ಮೀಸಲಾತಿ (Reservation) ಸೌಲಭ್ಯ ಏಕೆ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ (Suprme Court) ಮಹತ್ವದ ಪ್ರಶ್ನೆಯನ್ನು ಎತ್ತಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ಇಂದು ಹಿಂದುಳಿದ ವರ್ಗಗಳಲ್ಲಿರುವ ಅತ್ಯಂತ ಶ್ರೀಮಂತ ಅಥವಾ ಸಬಲ ವರ್ಗವನ್ನು (Creamy Layer) ಮೀಸಲಾತಿಯಿಂದ ಹೊರಗಿಡುವ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಯಿತು.
ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದಿಂದಾಗಿ ಒಂದು ಕುಟುಂಬ ಈಗಾಗಲೇ ಸಾಮಾಜಿಕವಾಗಿ ಮುನ್ನಡೆ ಸಾಧಿಸಿರುತ್ತದೆ. ಅಂತಹ ಪರಿಸ್ಥಿತಿಯಲ್ಲೂ ಅವರ ಮುಂದಿನ ಪೀಳಿಗೆಗೆ ಮೀಸಲಾತಿ ಕೇಳುತ್ತಾ ಹೋದರೆ ನಾವು ಎಂದಿಗೂ ಈ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ಮೀಸಲಾತಿಯ ಲಾಭ ಪಡೆದು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಉನ್ನತ ಮಟ್ಟ ತಲುಪಿ ಸಮೃದ್ಧಿ ಹೊಂದಿರುವ ಕುಟುಂಬಗಳು ಸ್ವಯಂಪ್ರೇರಿತರಾಗಿ ಮೀಸಲಾತಿ ವ್ಯವಸ್ಥೆಯಿಂದ ಹೊರಗುಳಿಯಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಒಂದು ಕುಟುಂಬವು ಮೀಸಲಾತಿಯ ಲಾಭ ಪಡೆದು ಉನ್ನತ ಶಿಕ್ಷಣ, ಆರ್ಥಿಕ ಸ್ಥಿರತೆ ಮತ್ತು ಸಮಾಜದಲ್ಲಿ ಪ್ರಭಾವಿ ಹುದ್ದೆಗಳನ್ನು ಗಳಿಸಿದಾಗ, ಅವರು ಈಗಾಗಲೇ ಸಾಮಾಜಿಕವಾಗಿ ಮೇಲ್ಮಟ್ಟಕ್ಕೆ ಚಲಿಸಿರುತ್ತಾರೆ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು. ಇದನ್ನೂ ಓದಿ: CBSE ಹೊಸ ತ್ರಿಭಾಷಾ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ; ಮುಂದಿನ ವಾರ ವಿಚಾರಣೆ
ಒಂದು ವೇಳೆ ಕೆನೆಪದರಕ್ಕೆ ಸೇರಿದ ಇಂತಹ ಸಬಲ ಕುಟುಂಬಗಳು ಮತ್ತು ಅವರ ಮಕ್ಕಳು ನಿರಂತರವಾಗಿ ಕೋಟಾ ಸೌಲಭ್ಯಗಳನ್ನು ಪಡೆಯುತ್ತಲೇ ಇದ್ದರೆ, ನಾವು ಎಂದಿಗೂ ಈ ಮೀಸಲಾತಿ ವ್ಯವಸ್ಥೆಯಿಂದ ಹೊರಬರಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ಎಚ್ಚರಿಸಿತು.
ಸಮಾಜದ ತಳಮಟ್ಟದಲ್ಲಿರುವ, ಇಂದಿಗೂ ಯಾವುದೇ ಸೌಲಭ್ಯ ಸಿಗದ ಬಡ ಹಿಂದುಳಿದ ವರ್ಗಗಳ ಜನರಿಗೆ ಸಿಗಬೇಕಾದ ನ್ಯಾಯಯುತ ಅವಕಾಶಗಳನ್ನು ಈ ಶ್ರೀಮಂತ ಅಥವಾ ಪ್ರಭಾವಿ ವರ್ಗದವರು ಕಸಿದುಕೊಳ್ಳುತ್ತಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕೆನೆಪದರ ನಿಯಮದ ಅನುಷ್ಠಾನ ಮತ್ತು ಅದರ ವ್ಯಾಪ್ತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಏನಿದು ಕೇಸ್?
ಕರ್ನಾಟಕದ ಕುರುಬ ಸಮುದಾಯಕ್ಕೆ ಸೇರಿದ ರಾಘವೇಂದ್ರ ಫಕೀರಪ್ಪ ಚಂದ್ರನಾವರ್ ಅವರು ಕೆಪಿಟಿಸಿಎಲ್ (KPTCL) ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿದ್ದರು. ಆದರೆ, ಇವರ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಅವರ ಒಟ್ಟು ಆದಾಯ 8 ಲಕ್ಷ ರೂ. ಮಿತಿಗಿಂತ ಹೆಚ್ಚಿತ್ತು.
ಆದಾಯದ ಮಿತಿ ಮೀರಿದ ಕಾರಣ ‘ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ’ಯು ಇವರು ಕೆನೆಪದರ (Creamy Layer) ವ್ಯಾಪ್ತಿಗೆ ಬರುತ್ತಾರೆ ಎಂದು ಇವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಅಭ್ಯರ್ಥಿಯು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

