– ಜೆಡಿಎಸ್ ಪಾದಯಾತ್ರೆ ವಿರುದ್ಧ ಸಚಿವ ವಾಗ್ದಾಳಿ
ಬೆಂಗಳೂರು: ಅಧಿಕಾರ ಕೊಟ್ಟವರು ಮುಖ್ಯಮಂತ್ರಿಗಳು. ಅವರ ತೀರ್ಮಾನಕ್ಕೆ ತಲೆ ಬಾಗುತ್ತೇನೆ ಎಂದು ಅಧಿಕಾರ ವಾಪಸ್ ಪ್ರಶ್ನೆಗೆ ಸಚಿವ ಮಾಗಡಿ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಅಧಿಕಾರ ಕೊಟ್ಟವರು ಯಾರು? ಮುಖ್ಯಮಂತ್ರಿಗಳು. ಅವರು ಏನೇ ತೀರ್ಮಾನ ತೆಗೆದುಕೊಂಡರೂ ಪಕ್ಷದ ಹಿತದೃಷ್ಟಿಯಿಂದ ನಾವು ಅದಕ್ಕೆ ತಲೆಬಾಗುತ್ತೇವೆ. ಮುಖ್ಯಮಂತ್ರಿ ಹೇಳಿದ ಹಾಗೆ ನಾವು ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಂ. ಕೃಷ್ಣಪ್ಪ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದ ವಿಚಾರ
ಎಂ. ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ವಿಚಾರಕ್ಕೂ ಬಾಲಕೃಷ್ಣ ಪ್ರತಿಕ್ರಿಯಿಸಿ ಕೃಷ್ಣಪ್ಪ ಅವರು ನಮ್ಮ ಪಕ್ಷದ ಪ್ರಮುಖ ಹಾಗೂ ಪವರ್‌ಫುಲ್ ಮುಖಂಡರು. ನಮ್ಮ ಪಕ್ಷದಲ್ಲಿ 100ಕ್ಕೂ ಹೆಚ್ಚು ಪವರ್‌ಫುಲ್ ಶಾಸಕರಿದ್ದಾರೆ. ಆದರೆ, ಸಚಿವ ಸ್ಥಾನ ನೀಡಲು 33 ಮಂದಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಎಲ್ಲರೂ ಹೊಂದಿಕೊಂಡು ಹೋಗಬೇಕಾಗಿದೆ ಎಂದು ಹೇಳಿದ್ದಾರೆ.
ಇಂದು ಏನಾದರೂ ತಪ್ಪಾಗಿದೆ ಎಂದರೆ, ಮುಂದೆ ಒಳ್ಳೆಯದು ಆಗಬಹುದು. ಈಗ ನಮಗೆ ತೊಂದರೆಯಾಗಿದ್ದರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಕಾದಿರಬಹುದು ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಈ ವಿಚಾರವನ್ನು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಜೆಡಿಎಸ್ ಪಾದಯಾತ್ರೆ ವಿರುದ್ಧ ಬಾಲಕೃಷ್ಣ ವಾಗ್ದಾಳಿ
ಇನ್ನು ನಾಳೆಯಿಂದ ನಡೆಯಲಿರುವ ಜೆಡಿಎಸ್ ಪಾದಯಾತ್ರೆ ವಿಚಾರವಾಗಿಯೂ ಬಾಲಕೃಷ್ಣ ಮಾತನಾಡಿದ್ದಾರೆ. ಇದು ಪಾದಯಾತ್ರೆಯಲ್ಲ, ಪ್ರಾಯಶ್ಚಿತ್ತ ಯಾತ್ರೆ ಎಂದು ವ್ಯಂಗ್ಯವಾಡಿದ್ದಾರೆ.
ಪಾದಯಾತ್ರೆಯಲ್ಲಿ ಭಾಗವಹಿಸುವವರು ಆ ಭಾಗದ ರೈತರಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ – ಮೂವರು ದುರ್ಮರಣ
ಬಿಡದಿ ಟೌನ್‌ಶಿಪ್ ಯೋಜನೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲೇ ಆರಂಭವಾಗಿತ್ತು. ಕುಮಾರಸ್ವಾಮಿ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಈ ಯೋಜನೆಯನ್ನು ಕೈಬಿಡಬಹುದಿತ್ತು. ಆದರೆ ಸ್ಥಳೀಯ ರೈತರು ಮನವಿ ಮಾಡಿದಾಗ, ಇದು ತಮ್ಮ ಕನಸಿನ ಕೂಸು ಎಂದು ಹೇಳಿ ಯೋಜನೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದರು ಎಂದು ಬಾಲಕೃಷ್ಣ ಹೇಳಿದ್ದಾರೆ.
ಈಗ ರೈತರ ಒತ್ತಾಯದ ಮೇರೆಗೆ ಸರ್ಕಾರ ಷೇರಿಂಗ್ ಪ್ರಮಾಣವನ್ನು 50%ಕ್ಕೆ ಹೆಚ್ಚಿಸಿದೆ. ಹಿಂದೆ ಹಣದ ಮೊತ್ತ ಕಡಿಮೆ ಇತ್ತು. ಇದೀಗ ಎರಡು ಕೋಟಿ ರೂ.ಗೂ ಹೆಚ್ಚು ನೀಡುವಂತೆ ತೀರ್ಮಾನಿಸಿ ಹಣ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ರೈತರಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಕಮಿಟಿ ರಚಿಸುವುದಾಗಿ ಹೇಳಿದ್ದಾರೆ. ಈ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ – ಮೂವರು ದುರ್ಮರಣ



