ವಿಜಯ್ ಕುಮಾರ್ (ದುನಿಯಾ ವಿಜಯ್) ನಿರ್ದೇಶಿಸುತ್ತಿರುವ ಮೂರನೇ ಚಿತ್ರ ‘ಸಿಟಿ ಲೈಟ್ಸ್’ ಚಿತ್ರೀಕರಣ ಮುಗಿಸಿಕೊಂಡಿದೆ. ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಎರಡು ಹಾಡುಗಳ ಮೂಲಕ ಸದ್ದು ಮಾಡಿದ್ದು, ಇದೀಗ ಮತ್ತೊಂದು ಹೊಸ ಹಾಡು ಬಿಡುಗಡೆಯಾಗಿದೆ.
ಪ್ರತಿ ಬಾರಿ ಜಾನಪದ ಹಾಗೂ ಬುಡಕಟ್ಟು ಹಾಡುಗಳಿಗೆ ಹೊಸ ರೂಪ ಕೊಟ್ಟು ಪ್ರೇಕ್ಷಕರ ಮುಂದೆ ತರುವ ದುನಿಯಾ ವಿಜಯ್, ಈ ಬಾರಿ ಮಾದಪ್ಪನ ಜಾನಪದ ಹಾಡಿನ ಸಾಲುಗಳನ್ನು ಬಳಸಿಕೊಂಡು ಈಗಿನ ಟ್ರೆಂಡ್‌ಗೆ ತಕ್ಕಂತೆ ಹೊಸ ಸಾಂಗ್ ರಿಲೀಸ್ ಮಾಡಿದ್ದಾರೆ.
‘ಅದೇ ಕೆಂಡದೋಕುಳಿ ಗಂಡನಾ’ ಹಾಡನ್ನು ಜಾನಪದ ಕಲಾವಿದ ಕಂಸಾಳೆ ಧನುಷ್ ಹಾಡಿದ್ದಾರೆ. ಹಾಡಿನಲ್ಲಿ ಬರುವ ರ‍್ಯಾಪ್ ಸಾಲುಗಳನ್ನು ಅಮೋಘ್ ಬಾಲಾಜಿ ಹಾಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕುಮಾರ್ ಅವರ ಕಿರಿಯ ಮಗಳು ಮೊನಿಷಾ ವಿಜಯ್ ಕುಮಾರ್ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿನಯ್ ರಾಜ್‌ಕುಮಾರ್, ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗುವ ಸವಾಲುಗಳು ಹಾಗೂ ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಸಿನಿಮಾದ ಮುಖ್ಯ ಕಥಾವಸ್ತು ಎಂದು ಹೇಳಿದರು. ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ವಿನಯ್ ರಾಜ್‌ಕುಮಾರ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಅರ್ಜಿ ವಾಪಸ್ ಪಡೆದ ಸಂಗೀತ – ಸಿಎಂ ವಿಜಯ್ ವಿಚ್ಛೇದನ ಪ್ರಕರಣ ಇತ್ಯರ್ಥ
ತಮ್ಮ ಚೊಚ್ಚಲ ಅಭಿನಯದ ಬಗ್ಗೆ ಮಾತನಾಡಿದ ಮೊನಿಷಾ ವಿಜಯ್ ಕುಮಾರ್, ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ ಎಂದು ಹೇಳಿದರು.
ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ವಿಜಯ್ ಕುಮಾರ್, “ನಾನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ” ಎಂದರು.
‘ಸಲಗ’ ಮತ್ತು ‘ಭೀಮ’ ಚಿತ್ರಗಳಲ್ಲಿ ಹಿಟ್ ಜೋಡಿಯಾಗಿದ್ದ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ಸಂಭಾಷಣೆಗಾರ ಮಾಸ್ತಿ ಈ ಚಿತ್ರದಲ್ಲೂ ಒಂದಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಕಂದಮ್ಮ’ ಮತ್ತು ‘ಬಾವ ಬಾವ’ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.
ವಿಜಯ್ ಕುಮಾರ್ ಮತ್ತು ವಿಕ್ರಮ್ ಆರ್ಯ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಕೆಡಿ’, ‘ಜನನಾಯಗನ್’ ಹಾಗೂ ‘ಟಾಕ್ಸಿಕ್’ ಸೇರಿದಂತೆ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘ಸಿಟಿ ಲೈಟ್ಸ್’ ಚಿತ್ರವನ್ನು ವಿತರಣೆ ಮಾಡುತ್ತಿದೆ.ಇದನ್ನೂ ಓದಿ: ವಿಶ್ವದ ಗಮನ ಸೆಳೆದ ಧುರಂಧರ್ – ಹಾಲಿವುಡ್ ಸಿನಿಮಾಗಳನ್ನ ಹಿಂದಿಕ್ಕಿ ಹೊಸ ದಾಖಲೆ



